ಹೊಸ ದಿಗಂತ ವರದಿ,ಸುಂಟಿಕೊಪ್ಪ:
ವಿಧಾನ ಪರಿಷತ್ ಚುನಾವಣೆಯನ್ನು ಚುನಾಯಿತ ಜನಪ್ರತಿನಿಧಿ ಮತದಾರರು ಗಂಭೀರವಾಗಿ ಪರಿಗಣಿಸುವುದರೊಂದಿಗೆ ಅಮಿಷಗಳಿಗೆ ಬಲಿಯಾಗದೆ ರಾಷ್ಟ್ರ ಪ್ರೇಮಕ್ಕೆ ಒತ್ತು ನೀಡುವ ಮೂಲಕ ಮತದಾನ ಮಾಡಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಕೆ.ಜಿ.ಬೋಪಯ್ಯ
ಸುಂಟಿಕೊಪ್ಪದ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ, ಕೆದಕಲ್ ಗ್ರಾಮ ಪಂಚಾಯಿತಿ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರು ಹಾಗೂ ಪಕ್ಷಸ ಕಾರ್ಯಕರ್ತರಿಗೆ ಬಿಜೆಪಿ ಪಕ್ಷದಿಂದ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರುಗಳು, ಕೇಂದ್ರದಿಂದ ಗ್ರಾಮ ಪಂಚಾಯಿತಿಯವರೆಗೂ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಕೊಡಗಿನಲ್ಲಿ 1334 ಮತದಾರರ ಪೈಕಿ 834 ಮಂದಿ ಬಿಜೆಪಿ ಬೆಂಬಲಿತ ಮತದಾರರಿದ್ದಾರೆ. ಆದರೂ ಹೊರಗಿನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷ ಕೊಡಗಿನ ಸ್ವಾಭಿಮಾನಕ್ಕೆ ಧಕ್ಕೆ ತಂದು ‘ಹಾಸನ ರಾಜಕೀಯ’ ಸೃಷ್ಟಿ ಮಾಡಿ ಜಾತಿ ರಾಜಕೀಯದ ಅಮಿಷ ಒಡ್ಡಿ ಮತದಾರರನ್ನು ಸಳೆಯುವ ಪ್ರಯತ್ನ ನಡೆಸುತ್ತಿದೆ. ಈ ಬಗ್ಗೆ ಮತದಾರರು ಎಚ್ಚರ ವಹಿಸಬೇಕೆಂದು ಅವರುಗಳು ಹೇಳಿದರು.
ಬಿಜೆಪಿ ಆಭ್ಯರ್ಥಿ ಸುಜಾ ಕುಶಾಲಪ್ಪ ಮಾತನಾಡಿ ಕೊಡಗಿನ ನಾಡಿಮಿಡಿತ ಅರಿತಿರುವ ಗ್ರಾಮೀಣ ಪ್ರದೇಶದವರಲ್ಲಿ ಒಡನಾಡಿಯಾಗಿರುವ ತಾನು ಎಲ್ಲಾ ವರ್ಗದವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಕೈಗೆ ಸಿಗುವವರಿಗೆ ಮತ ನೀಡಿ ಎಂದು ಬಿಜೆಪಿ ಉಪಾಧ್ಯಕ್ಷ ವಿ.ಕೆ.ಲೋಕೇಶ್ ಹೇಳಿದರೆ ದೇಶಕೋಸ್ಕರ ಮತ ನೀಡಬೇಕು ಎಂದು ಬಿ.ಬಿ.ಭಾರತೀಶ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ಮಾಜಿ ಅಧ್ಯಕ್ಷ ಕೊಮಾರಪ್ಪ, ಸುಂಟಿಕೊಪ್ಪ ಶಕ್ತಿ ಕೇಂದ್ರದ ಪ್ರಮುಖರಾದ ಬಿ.ಕೆ.ಪ್ರಶಾಂತ್,ವಾಸು ಹಾಜರಿದ್ದರು.