ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………
ಹೊಸ ದಿಗಂತ ವರದಿ,ಕಲಬುರಗಿ:
ಜಿಲ್ಲೆಯ 209 ಪರೀಕ್ಷಾ ಕೇಂದ್ರಗಳಲ್ಲಿಯೂ ಸೋಮವಾರ ಎಸ್ಸೆಸೆಲ್ಸಿ ಪರೀಕ್ಷೆಗಳು ಸುಸೂತ್ರವಾಗಿ ಆರಂಭವಾದವು.
ನಗರದಲ್ಲಿ ಬೆಳಿಗ್ಗೆ 9ರ ಹೊತ್ತಿಗೇ ಹಲವು ಪಾಲಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಗಳತ್ತ ಕರೆದುಕೊಂಡು ಬಂದರು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ತಂಡಗಳು ವಾಹನಗಳ ಮೂಲಕ ಬಂದು ಪರೀಕ್ಷಾ ಕೊಠಡಿ ಸೇರಿಕೊಂಡರು. ಬೆಳಿಗ್ಗೆ 10ರ ಹೊತ್ತಿಗೆ ಎಲ್ಲ ವಿದ್ಯಾರ್ಥಿಗಳನ್ನೂ ಕೊಠಡಿಯೊಳಗೆ ಬಿಡಲಾಗಿದ್ದು, 10.30ಕ್ಕೆ ಪರೀಕ್ಷೆ ಆರಂಭವಾದವು.
ಪರೀಕ್ಷಾ ಕೇಂದ್ರದ ಹೊರಗೆ ಎಲ್ಲರಿಗೂ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಮಾಸ್ಕ್ ಧರಿಸಿದವರನ್ನು ಒಳಗೆ ಬಿಡಲಾಯಿತು. ಮಾಸ್ಕ್ ಇಲ್ಲದೇ ಬಂದ ಕೆಲ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಇದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಮಾಸ್ಕ್ ನೀಡಿದರು. ಮತ್ತೆ ಕೆಲ ವಿದ್ಯಾರ್ಥಿಗಳು ಫೇಸ್ಶೀಲ್ಡ್ಗಳನ್ನೂ ಧರಿಸಿಕೊಂಡು ಬಂದರು.
ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಎರಡು ಸಾಲುಗಳನ್ನು ಮಾಡಿ ನಿಲ್ಲಿಸಲಾಯಿತು. ಕನಿಷ್ಠ ಅಂತರ ಇರುವಂತೆ ಮಾರ್ಕಿಂಗ್ ಮಾಡಿದ್ದ ಬಾಕ್ಸ್ಗಳಲ್ಲೇ ವಿದ್ಯಾರ್ಥಿಗಳು ನಿಂತುಕೊಂಡರು.
ಒಟ್ಟು 209 ಪರೀಕ್ಷಾ ಕೇಂದ್ರಗಳಲ್ಲಿ 20 ಸೂಕ್ಷ್ಮ ಹಾಗೂ 4 ಕೇಂದ್ರಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಅಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ. 45,357 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 5977 ಸಿಬ್ಬಂದಿ ನಿಯೋಜಿಸಲಾಗಿದೆ.
ನಗರ ಹಾಗೂ ಜಿಲ್ಲೆಯ ಬಹುಪಾಲು ಕಡೆ ಭಾನುವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದರಿಂದ, ಬಹುಪಾಲು ವಿದ್ಯಾರ್ಥಿಗಳು ಜರ್ಕಿನ್, ರೇನ್ಕೋಟ್, ಛತ್ರಿಗಳ ಸಮೇತ ಬಂದಿದ್ದು ಕಂಡುಬಂತು.