ದಿಗಂತ ವರದಿ ಯಾದಗಿರಿ:
2021-22 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಯಾದಗಿರಿ ಜಿಲ್ಲೆಯ ರೈತರಿಂದ ತೊಗರಿ ಖರೀದಿಸಲು , ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು , ರೈತ ಭಾಂದವರು ಕೂಡಲೇ ತಮ್ಮ ಹತ್ತಿರದ ತೊಗರಿ ಖರೀದಿ ಕೇಂದ್ರಗಳಲ್ಲಿ ಆಧಾರ ಕಾರ್ಡ್,ಪ್ರೂಟ್ ಐಡಿ ತೆಗೆದುಕೊಂಡು ಬಂದು ನೊಂದಣಿಗೆ ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಕಾಯದೇ ತಮ್ಮ ಹೆಸರುಗಳನ್ನು ನೊಂದಾಯಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಕೋರಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ 2021-22 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ತೊಗರಿ ಖರೀದಿಸಲು ರೈತರು ನೊಂದಣಿ ಮಾಡುವ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯಲ್ಲಿ 2021-22 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಕಾಳುಗಳನ್ನು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಏಫ್ ಪಿ ಓ ಗಳ ಮುಖಾಂತರ ಪ್ರತಿ ಕ್ವಿಂಟಾಲ್ ಗೆ ಬೆಂಬಲ ಬೆಲೆ ರೂ.6300 ಗಳಿದ್ದು ಪ್ರತಿಯೊಬ್ಬ ರೈತರಿಂದ ಪ್ರತಿ ಎಕರೆಗೆ 7.5 ಕ್ವಿಂಟಾಲ್ ರಂತೆ ಗರಿಷ್ಠ 15 ಕ್ವಿಂಟಾಲ್ ತೊಗರಿ ಖರೀದಿಸುವ ಸಂಬಂಧ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ದ್ವಿದಳ ಸಹಕಾರ ಮಾರಾಟ ಮಹಾಮಂಡಳಿ ವತಿಯಿಂದ 36 ಖರೀದಿ ಕೇಂದ್ರಗಳನ್ನು ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ( ತೊಗರಿ ಅಭಿವೃದ್ಧಿ ಮಂಡಳಿ) ವತಿಯಿಂದ 10 ಖರೀದಿ ಕೇಂದ್ರಗಳನ್ನು ಒಟ್ಟು ಜಿಲ್ಲೆಯಲ್ಲಿ 46 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ರೈತರ ನೊಂದಣಿ ಕಾರ್ಯದ ಕಾಲಾವಧಿಯನ್ನು ಡಿಸೆಂಬರ್ 15 ಪ್ರಾರಂಭಿಸಿ 45 ದಿನಗಳವರೆಗೆ ಹಾಗೂ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಶೋಕ ತೋಟೇದ್, ಯಾದಗಿರಿ ಎಪಿಎಂಸಿ ಸಹಾಯಕ ನಿರ್ದೇಶಕ ಶಿವಕುಮಾರ, ಎಪಿಎಂಸಿ ಕಾರ್ಯದರ್ಶಿ ಪ್ರಕಾಶ ಅಯ್ಯಾಳಕರ್, ಸಹಕಾರ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ವ್ಯವಸ್ಥಾಪಕ ವಿನೋದಕುಮಾರ, ಸುರಪುರ ಎಪಿಎಂಸಿ ಕಾರ್ಯದರ್ಶಿ ರಿಯಾಜ್ ಇನ್ನಿತರರು ಉಪಸ್ಥಿತರಿದ್ದರು.