ಚೀನಾ ಸಿಲ್ಕ್ ತಗ್ಗಿಸಲು ಸರ್ಕಾರದ ಮಹತ್ತರ ಹೆಜ್ಜೆ: ಉತ್ತರ ಕರ್ನಾಟಕದಲ್ಲಿ ರೇಷ್ಮೆ ಕೈಗಾರಿಕೆಗಳ ಸ್ಥಾಪನೆ !

– ಸಂತೋಷ ಡಿ. ಭಜಂತ್ರಿ

ಭಾರತ ಶೇ.65ರಷ್ಟು ಚೀನಾ ಸಿಲ್ಕ್ ಅವಲಂಬಿಸಿದ್ದು, ಇದರ ಪ್ರಮಾಣ ತಗ್ಗಿಸಲು ಹಾಗೂ ದೇಸಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು ಉತ್ತರ ಕರ್ನಾಟಕದಲ್ಲಿ ರೇಷ್ಮೆ ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರ ಮುಂದಾಗಿದೆ. ರೇಷ್ಮೆ ಬೆಳೆ ವರ್ಷದ 12 ತಿಂಗಳು ಉತ್ಪನ್ನ ಪಡೆಯಬಹುದಾದ ಹಾಗೂ ರೈತರಿಗೆ ಹೆಚ್ಚಿನ ಲಾಭ ನೀಡುವ ಸೂಕ್ಷ್ಮ ಬೆಳೆಯಾಗಿದೆ. ರೇಷ್ಮೆ ಕೈಗಾರಿಕೆಗಳ ಸ್ಥಾಪನೆಯಿಂದ ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಯಲ್ಲಿರುವ ಲಕ್ಷಾಂತರ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಕೃಷಿ ಪ್ರೋತ್ಸಾಹಕ್ಕೆ ಆದ್ಯತೆ ನೀಡಲಾಗಿದೆ.

ಹೆಚ್ಚು ಆಸಕ್ತಿ ತೋರುತ್ತಿರಲಿಲ್ಲ:

ಭೂಮಿ ಗುಣಧರ್ಮ, ಹವಾಮಾನ ಕಾರಣಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ರೇಷ್ಮೆ ಕೃಷಿಗೆ ಈ ಮೊದಲು ರೈತರು ಹೆಚ್ಚು ಆಸಕ್ತಿ ತೋರುತ್ತಿರಲಿಲ್ಲ. ಇದರಿಂದ ದೇಶದಲ್ಲಿ ಚೀನಾ ಸಿಲ್ಕ್ಗೆ ಭಾರಿ ಬೇಡಿಕೆಯಿತ್ತು. ಇದನ್ನು ಮನಗಂಡ ಸರ್ಕಾರ ರೈತರಿಗೆ ಪ್ರೋತ್ಸಾಹಕ ಯೋಜನೆಗಳ ಜಾರಿಗೆ ತರುವ ಮೂಲಕ ರೇಷ್ಮೆ ಕೃಷಿಯೆಡೆಗೆ ಆಕರ್ಷಿತರಾಗುವಂತೆ ಮಾಡುತ್ತಿದೆ.
ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ:

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಣೆಬೆನ್ನೂರು ತಾಲೂಕು ಕೂನಬೇವು ಗ್ರಾಮದಲ್ಲಿ 5 ಎಕರೆ ಪ್ರದೇಶಲ್ಲಿ ನಬಾರ್ಡ್ ಬ್ಯಾಂಕ್ನ ರೂ.15 ಕೋಟಿ ಆರ್ಥಿಕ ನೆರವಿನೊಂದಿಗೆ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಾಪನೆಗೆ ಮುಂದಾಗಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ ರೇಷ್ಮೆ ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ತಲಾ ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದಲ್ಲಿ 115 ಸ್ವಯಂ ಚಾಲಿತ ನೂಲು ಬಿಚ್ಚುವ ಘಟಕ ಸ್ಥಾಪಿಸಿದ್ದು, ಎಲ್ಲ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಪ್ರಯೋಗಾಲಯ ಸ್ಥಾಪಿಸುವ ಮೂಲಕ ರೇಷ್ಮೆಯ ಗುಣಮಟ್ಟದ ತಪಾಸಣೆಗೆ ಕ್ರಮ ವಹಿಸಿದ್ದು, ದೇಶದಲ್ಲಿ ರೇಷ್ಮೆಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಗಳಿವೆ.

1.7 ಲಕ್ಷಕ್ಕೂ ಅಧಿಕ ಹೆಕ್ಟೇರ್ ರೇಷ್ಮೆ ಬೆಳೆ ಬಿತ್ತನೆ:

ರಾಜ್ಯದಲ್ಲಿ 1.7 ಲಕ್ಷಕ್ಕೂ ಅಧಿಕ ಹೆಕ್ಟೇರ್ ರೇಷ್ಮೆ ಬೆಳೆ ಬಿತ್ತನೆ ಕ್ಷೇತ್ರವಿದ್ದು, 1 ಲಕ್ಷ ರೇಷ್ಮೆ ಬೆಳೆಗಾರರಿದ್ದಾರೆ. ಬೆಳಗಾವಿ ವಲಯದ 9 ಜಿಲ್ಲೆಗಳಲ್ಲಿ 13 ಸಾವಿರಕ್ಕೂ ಅಧಿಕ ಹೆಕ್ಟೇರ್ ರೇಷ್ಮೆ ಬಿತ್ತನೆ ಕ್ಷೇತ್ರವಿದೆ. 700ಕ್ಕೂ ಅಧಿಕ ಬೆಳೆಗಾರರಿದ್ದು, 350 ಮೆಟ್ರಿಕ್ ಟನ್ ಗೂಡು ಮಾರುಕಟ್ಟೆ ಹೊಂದಿದೆ.

ಧಾರವಾಡದಲ್ಲಿ ರೇಷ್ಮೆ ಹುಳುಗಳಿಗೆ ಆಹಾರ:

ಧಾರವಾಡ ಜಿಲ್ಲೆಯಲ್ಲಿ 83 ಗ್ರಾಮಗಳಲ್ಲಿ 228 ರೈತರು 413 ಎಕರೆ ಪ್ರದೇಶದಲ್ಲಿ ರೇಷ್ಮೆ ಹುಳುಗಳಿಗೆ ಆಹಾರಕ್ಕಾಗಿ ಹಿಪ್ಪುನೇರಳೆ ಬೇಸಾಯ ಮಾಡುತ್ತಿದ್ದಾರೆ. ಈ ಗಿಡಗಳಿಂದ ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಸೊಪ್ಪನ್ನು ಕೊಯ್ದು ರೇಷ್ಮೆ ಹುಳುಗಳಿಗೆ ಆಹಾರವಾಗಿ ಬಳಸಲಾಗುತ್ತಿದೆ.

ರೇಷ್ಮೆ ಕೃಷಿಕರಿಗೆ ತರಬೇತಿ:
ಧಾರವಾಡದ ರಾಯಾಪೂರದಲ್ಲಿರುವ ರೇಷ್ಮೆ ತರಬೇತಿ ಸಂಸ್ಥೆ ಉತ್ತರ ಕರ್ನಾಟಕದ 9 ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಇಲ್ಲಿ ರೇಷ್ಮೆ ಕೃಷಿಕರಿಗೆ ಕ್ಷೇತ್ರ ತರಬೇತಿ, ಮಹಿಳೆಯರಿಗೆ ಕರಕುಶಲ ಹಾಗೂ ಕೇಂದ್ರ ರೇಷ್ಮೆ ಮಂಡಳಿ ನೂಲು ಬಿಚ್ಚಾಣಿಕೆ ತರಬೇತಿ ನೀಡಿ ಉತ್ತರ ಕರ್ನಾಟಕದ ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ ನೀಡುತ್ತಿದೆ. ಹಾವೇರಿಯಲ್ಲಿ ಹೆಚ್ಚು ಬೆಳೆಗಾರರು:
ಉತ್ತರ ಕರ್ನಾಟಕದಲ್ಲಿ ಹಾವೇರಿ ಜಿಲ್ಲೆ ಅತೀ ಹೆಚ್ಚು 2500 ರೇಷ್ಮೆ ಬೆಳೆಗಾರರನ್ನು ಹೊಂದಿದೆ. 2021-22 ರಲ್ಲಿ 1331 ಮೆಟ್ರಿಕ್ ಟನ್ ಗೂಡು ಉತ್ಪಾದಿಸಿದ್ದು ದಾಖಲೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!