₹2.50 ಕೋಟಿ ವೆಚ್ಚದಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ: ಅಪ್ಪಚ್ಚು ರಂಜನ್

ದಿಗಂತ ವರದಿ ಕುಶಾಲನಗರ:

ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳಿಲುಗುಪ್ಪೆ ಗ್ರಾಮದಲ್ಲಿ ಈಗಾಗಲೇ ಕಾದಿರಿಸುವ ಜಾಗದಲ್ಲಿ ಎರಡೂವರೆ ಕೋಟಿ ರೂ.ವೆಚ್ಚದಲ್ಲಿ ಘನ ತ್ಯಾಜ್ಯ ವಸ್ತುಗಳ ಸಂಸ್ಕರಣಾ ಘಟಕವನ್ನು ತೆರೆಯಲು ಚಿಂತನೆ ನಡೆಲಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಅವರು ತಿಳಿಸಿದ್ದಾರೆ.
ತೊರೆನೂರು ಗ್ರಾಮ ಪಂಚಾಯತಿ ಅವರಣದಲ್ಲಿ ಡಿಜಿಟಲ್ ಗ್ರಂಥಾಲಯ ಮಾಹಿತಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳಿಲುಗುಪ್ಪೆ ಗ್ರಾಮದಲ್ಲಿ ಎಂ.ಆರ್.ಎಫ್.ಯೋಜನೆ ಅಡಿಯಲ್ಲಿ ಪ್ರಥಮವಾಗಿ ಎರಡು ಎಕರೆ ಪ್ರದೇಶದಲ್ಲಿ ಘನ ಒಣ ತ್ಯಾಜ್ಯ ವಸ್ತುಗಳ ಸಂಸ್ಕರಣಾ ಘಟಕವನ್ನು ಅರಂಭಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಪ್ರಕ್ರಿಯೆಗಳು ನಡೆಯುತ್ತಿದ್ದು, ಜಾಗದ ಸರ್ವೆ ಕಾರ್ಯ ಸಂಪೂರ್ಣಗೊಳಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ನುಡಿದರು.
ಇದರ ಜೊತೆಗೆ ಘಟಕಕ್ಕೆ ಸಂಬಂಧಿಸಿದ ಯೋಜನೆಗೆ ಅಧುನಿಕ ತಂತ್ರಜ್ಞಾನದ ಯಂತ್ರಗಳ ಖರೀದಿ ಮಾಡುವ ಪ್ರಕ್ರಿಯೆ ರಾಜ್ಯ ಮಟ್ಟದ ಅಧಿಕಾರಿಗಳಿಂದ ನಡೆಯುತ್ತಿದೆ ಎಂದೂ ಶಾಸಕರು ತಿಳಿಸಿದರು.
ಈ ಯೋಜನೆಯು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸ್ವಚ್ಛ ಭಾರತ್’ನ ಅನುದಾನದಲ್ಲಿ ಅನುಷ್ಠಾನಗೊಳ್ಳಲಿದ್ದು, ರಾಜ್ಯ ಸರ್ಕಾರದ ನಿಯಮನುಸಾರವಾಗಿ ಸಂಬಂಧಿಸಿದ ಇಲಾಖೆ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕಂದಾಯ ಇಲಾಖೆ ವತಿಯಿಂದ ಸರ್ವೆ ಕಾರ್ಯ ಮುಗಿದ ನಂತರ ಸಂಬಂಧಿಸಿದ ಇಲಾಖೆಯವರು ಎರಡು ಎಕರೆ ಪ್ರದೇಶದಲ್ಲಿ ಘಟಕವನ್ನು ಅರಂಭ ಮಾಡಲು ಎಲ್ಲಾ ಸಿದ್ಧತೆ ನಡೆಸಿತ್ತಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!