Sunday, August 14, 2022

Latest Posts

ಕೇರಳದಲ್ಲಿ ತುರ್ತು ಸಂದರ್ಭಗಳಲ್ಲಿ ಮಹಿಳೆಯರಿಗೆ ದೂರು ನೀಡಲು ವಿಶೇಷ ಕಿಯೋಸ್ಕ್ ಸ್ಥಾಪನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ತುರ್ತು ಸಂದರ್ಭಗಳಲ್ಲಿ ದೂರು ನೀಡಲು ಮಹಿಳೆಯರಿಗೆ ಮಾತ್ರವಾಗಿ ನಗರಗಳಲ್ಲಿ ವಿಶೇಷ ಕಿಯೋಸ್ಕ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ (ಡಿಜಿಪಿ) ಲೋಕನಾಥ್ ಬೆಹ್ರಾ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಈ ಯೋಜನೆಯ ಮೊದಲ ಹಂತವಾಗಿ ಕೊಚ್ಚಿ ನಗರದ ಹೈಕೋರ್ಟ್ ಕಟ್ಟಡ ಬಳಿಯ ಮರೈನ್ ಡ್ರೈವ್ ನಲ್ಲಿ ಕಿಯೋಸ್ಕ್ ಘಟಕವನ್ನು ಸ್ಥಾಪಿಸಲಾಗಿದೆ. ಇಲ್ಲಿ ಕಿಯೋಸ್ಕ್ ಸ್ಥಾಪಿಸುವ ಜವಾಬ್ದಾರಿಯನ್ನು ಕೊಚ್ಚಿ ಜಿಲ್ಲಾಧಿಕಾರಿಗೆ ನೀಡಲಾಗಿತ್ತು. ಆರಂಭದಲ್ಲಿ ಕೊಚ್ಚಿಯಲ್ಲಿ ಜಾರಿಗೆ ಬಂದ ಈ ವ್ಯವಸ್ಥೆಯನ್ನು ಎರಡನೇ ಹಂತದಲ್ಲಿ ತಿರುವನಂತಪುರ, ಕೊಲ್ಲಂ, ತೃಶೂರು, ಕಲ್ಲಿಕೋಟೆ ಮತ್ತು ಕಣ್ಣೂರು ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಮೂರನೇ ಹಂತದಲ್ಲಿ ಕಾಸರಗೋಡು ಜಿಲ್ಲೆ ಸೇರಿದಂತೆ ಉಳಿದ ಜಿಲ್ಲೆಗಳನ್ನು ಪರಿಗಣಿಸಲಾಗುವುದು. ಈ ವ್ಯವಸ್ಥೆಯ ಮೂಲಕ ಮಹಿಳೆಯರು ಸುಲಭವಾಗಿ ದೂರು ನೀಡಬಹುದು ಎಂದು ರಾಜ್ಯ ಡಿಜಿಪಿ ಹೇಳಿದ್ದಾರೆ.
ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೊಚ್ಚಿ ನಗರದಲ್ಲಿ ಕಿಯೋಸ್ಕ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಅಲ್ಲಿ ಮಹಿಳೆಯರು ತುರ್ತು ಸಂದರ್ಭಗಳಲ್ಲಿ ಪೊಲೀಸ್ ಠಾಣೆಗೆ ಹೋಗದೆ ಕಿಯೋಸ್ಕ್ ಮೂಲಕ ದೂರು ಸಲ್ಲಿಸಬಹುದು. ವಿಶೇಷ ನಿಯಂತ್ರಣ ಕೊಠಡಿಯಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಲು ಮತ್ತು ದೂರು ನೀಡಲು ವೀಡಿಯೋ ಕರೆ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಕಿಯೋಸ್ಕ್ ಮೂಲಕ ಪಡೆದ ದೂರುಗಳನ್ನು ಆಯಾ ಪೊಲೀಸ್ ಠಾಣೆಗಳ ಸಹಾಯದಿಂದ ಪರಿಹರಿಸಲಾಗುವುದು. ಮಾತ್ರವಲ್ಲದೆ ಸಮಯಕ್ಕೆ ಸರಿಯಾಗಿ ದೂರವಾಣಿ ಮೂಲಕ ತನಿಖೆಯ ಪ್ರಗತಿಯ ಬಗ್ಗೆ ದೂರುದಾರರಿಗೆ ತಿಳಿಸಲಾಗುವುದು ಎಂದು ಲೋಕನಾಥ್ ಬೆಹ್ರಾ ನುಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss