Thursday, June 30, 2022

Latest Posts

ಕೊಡಗಿನಲ್ಲಿ ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆಯಾಗಲಿ: ಎಂ.ಎ. ಪೊನ್ನಪ್ಪ

ಹೊಸ ದಿಗಂತ ವರದಿ,ಮಡಿಕೇರಿ:

ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಅಗತ್ಯ ಪ್ರೋತ್ಸಾಹ ಬೆಂಬಲವನ್ನು ನೀಡುವ ನಿಟ್ಟಿನಲ್ಲಿ ಕೊಡಗಿನಲ್ಲಿ ‘ಕ್ರೀಡಾ ವಿಶ್ವ ವಿದ್ಯಾಲಯ’ ಸ್ಥಾಪನೆಯ ಅಗತ್ಯವಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಮನೆಯಪಂಡ ಎ.ಪೊನ್ನಪ್ಪ ಅಭಿಪ್ರಾಯಿಸಿದ್ದಾರೆ.
ಅಲ್ಲಾರಂಡ ರಂಗಚಾವಡಿ ಮತ್ತು ಸಿರಿಗನ್ನಡ ವೇದಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಕೊಡವ ಸಮಾಜ ಸಭಾಂಗಣದಲ್ಲಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿತ ‘ವಿಚಾರ ಸಂಕಿರಣ ಮತ್ತು ಮಂಥನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಮಟ್ಟದಲ್ಲಿ ಕ್ರೀಡಾ ವಿವಿ ಸ್ಥಾಪನೆಯ ಚಿಂತನೆಗಳಿದೆ. ಒಂದೊಮ್ಮೆ ವಿವಿ ಸ್ಥಾಪನೆಯಾಗುವುದೇ ಆಗಿದ್ದಲ್ಲಿ ಅದು ಕೊಡಗಿನಲ್ಲೇ ಆಗಬೇಕೆನ್ನುವ ಹಕ್ಕೊತ್ತಾಯ ಇಲ್ಲಿನವರದಾಗಿರಬೇಕೆಂದು ದೃಢವಾಗಿ ನುಡಿದ ಪೊನ್ನಪ್ಪ, ಈ ಹಿಂದೆ ಕೊಡಗು ಕ್ರೀಡಾ ಚಟುವಟಿಕೆಗಳ ಮೂಲಕ ಉತ್ತರದ ಪಂಜಾಬ್ ರಾಜ್ಯವನ್ನು ಹಿಂದಿಕ್ಕಿತ್ತು. ಆದರೆ, ಇಂದು ಪರಿಸ್ಥಿತಿ ಬದಲಾಗಿದ್ದು, ಜಿಲ್ಲೆಯಲ್ಲಿ ಕ್ರೀಡೆಯ ಬೆಳವಣಿಗೆ ಕ್ಷೀಣಿಸುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಜಿಲ್ಲೆಯಲ್ಲಿ ಕೀಡಾ ಚಟುವಟಿಕೆಗಳೇ ನಾಶವಾಗುವ ಸಾಧ್ಯತೆ ಇದೆಯೆಂದು ಕಳವಳ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕರು, ಸಂಸದರು, ಜನಪ್ರತಿನಿಧಿಗಳು ಕೊಡಗಿನ ಕ್ರೀಡಾ ಬೆಳವಣಿಗೆಯ ಮಹತ್ವದ ಬಗ್ಗೆ ಅರಿತು, ವಿವಿ ಸ್ಥಾಪನೆಯತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದರೆ ಕೊಡಗಿನಲ್ಲಿ ಕ್ರೀಡಾ ವಿಶ್ವ ವಿದ್ಯಾನಿಲಯ ಸ್ಥಾಪನೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಯುವ ಸಮೂಹವೂ ಆಸಕ್ತವಾಗಬೇಕೆಂದು ಕರೆ ನೀಡಿದರು.
ಭಾಷಾ ಪ್ರಯೋಗದ ಕೃಷಿ ನಡೆಯಲಿ: ಕ್ರೀಡಾ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಯುವ ಪೀಳಿಗೆಯ ಪತ್ರಕರ್ತರು ಭಾಷಾ ಪ್ರಯೋಗದ ಮೇಲೆ ವಿಶೇಷ ಕೃಷಿ ಮಾಡುವ ಅಗತ್ಯವಿದೆಯೆಂದು ಇದೇ ಸಂದರ್ಭ ಪೊನ್ನಪ್ಪ ಅಭಿಪ್ರಾಯಿಸಿದರು.
ಮಹಿಳೆಯರ ಹೋರಾಟ ಸಮರ್ಥವಾಗಿ ದಾಖಲಾಗಿಲ್ಲ: ಮೈಸೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಪೋಸ್ಟ್ ಡಾಕ್ಟೋರಲ್ ಫೆಲೋ ಡಾ. ಪದ್ಮಶ್ರೀ ಟಿ. ಅವರು, ‘ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯ ಪಾತ್ರ’ ವಿಷಯದ ಕುರಿತು ಮಾತನಾಡಿ, ಪಾಶ್ಚಿಮಾತ್ಯರ ದಾಸ್ಯದ ಸಂಕೋಲೆಯನ್ನು ಕಳಚಿಕೊಳ್ಳುವ ಸ್ವಾತಂತ್ರ್ಯ ಹೋರಾಟದಲ್ಲಿನ ಮಹಿಳೆಯರ ತ್ಯಾಗ ಬಲಿದಾನಗಳು ಇತಿಹಾಸದಲ್ಲಿ ಸಮರ್ಥವಾಗಿ ದಾಖಲಾಗಿಲ್ಲವೆಂದು ಅಭಿಪ್ರಾಯಿಸಿದರು.
ಈ ಸಮಾಜ ಮಹಿಳೆಯನ್ನು ಭೌತಿಕವಾಗಿ ಮತ್ತು ಆಕೆಯ ಸಾಧನೆಯನ್ನು ದ್ವಿತೀಯ ದರ್ಜೆಯದ್ದಾಗಿ ಪರಿಗಣಿಸಿರುವುದೇ ಇದಕ್ಕೆ ಕಾರಣ. ಇಂತಹ ಮಾನಸಿಕ ಬಂಧವನ್ನು ಒಡೆಯುವ ಅಗತ್ಯವಿರುವುದಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಮಾಜಿ ಕುಲಸಚಿವ ಕೋಡೀರ ಲೋಕೇಶ್‍ ಮೊಣ್ಣಪ್ಪ ವಹಿಸಿದ್ದರು. ಹಾಸನದ ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಸಾಹಿತಿ ಮಾಳೇಟಿರ ಸೀತಮ್ಮ ವಿವೇಕ್ ‘ಪಂಚ ದ್ರಾವಿಡ ಭಾಷೆಗಳಲ್ಲಿ ಕೊಡವ ಭಾಷೆಯ ಅಸ್ತಿತ್ವ’ ವಿಷಯದ ಕುರಿತು ಮಾತನಾಡಿದರು. ಅಲ್ಲಾರಂಡ ರಂಗ ಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೇಮಲತಾ ತಂಡ ಸ್ವಾಗತ ಗೀತೆ ಹಾಡಿದರೆ, ರೇಣುಕಾ ಸ್ವಾಗತಿಸಿದರು. ಕಿಶೋರ್ ರೈ ಮತ್ತು ರಂಜಿತ್ ಕವಲಪಾರ ಕಾರ್ಯಕ್ರಮ ನಿರ್ವಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss