ಹೊಸ ದಿಗಂತ ವರದಿ, ಮೈಸೂರು:
ಅರಮನೆ ನಗರಿ ಮೈಸೂರಿನಾದ್ಯಾಂತ ದಸರಾ ಪ್ರಯುಕ್ತ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರವನ್ನು ದಸರಾ ಮುಗಿದ ಬಳಿಕ ಕೆಲದಿನಗಳ ಕಾಲ ಮುಂದುವರಿಸಬೇಕು ಎಂದು ಮೈಸೂರು ಸಂಘ-ಸoಸ್ಥೆಗಳ ಒಕ್ಕೂಟ ಆಗ್ರಹಿಸಿದೆ.
ವಿದ್ಯುತ್ ದೀಪಾಲಂಕಾರದಿoದ ಮೈಸೂರು ನಗರ ಕಂಗೊಳಿಸುತ್ತಿದೆ. ಪ್ರತಿ ವರ್ಷಕ್ಕಿಂತ ಈ ವರ್ಷದ ವಿದ್ಯುತ್ ದೀಪಾಲಂಕಾರ ವಿಶೇಷವಾಗಿದ್ದು, ರಾಜ್ಯದ ಹಾಗೂ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಬಂದು ಇದನ್ನು ನೋಡಿ ಖುಷಿಪಡುತ್ತಿದ್ದಾರೆ. ಆದರೆ ವಿಜಯದಶಮಿ ದಿನದಂದೇ (ಅಕ್ಟೋಬರ್ 15) ವಿದ್ಯುತ್ ದೀಪಾಲಂಕಾರ ಕೊನೆಗೊಳ್ಳಲಿದೆ.
ಸಂಬAಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದೀಪಾಲಂಕಾರವನ್ನು ಇನ್ನೂ 10 ದಿನಗಳ ಕಾಲ ವಿಸ್ತರಿಸಿದಲ್ಲಿ ಈಗ ವಿವಿಧ ಕಾರಣಗಳಿಂದ ನಗರಕ್ಕೆ ಆಗಮಿಸಲಾಗದೆ ಉಳಿದಿರುವ ಪ್ರವಾಸಿಗರು ದಸರಾ ಮುಗಿದ ಬಳಿಕವಾದರೂ ಬಂದು ನಗರದ ಸೌಂದರ್ಯ ಸವಿಯಬಹುದು. ಇದರ ಫಲವಾಗಿ ಬಹಳಷ್ಟು ಸೊರಗಿರುವ ಪ್ರವಾಸೋದ್ಯಮ ಸ್ವಲ್ಪ ಚೇತರಿಸಿಕೊಳ್ಳುತ್ತದೆ.
ಜೊತೆಗೆ ಮಳೆ ಮತ್ತಿತರ ಕಾರಣಗಳಿಂದಾಗಿ ದೀಪಾಲಂಕಾರ ನೋಡಲು ಸಾಧ್ಯವಾಗದವರಿಗೆ ಇನ್ನೂ ಕೆಲವು ದಿನಗಳ ಕಾಲ ಅವಕಾಶ ಸಿಕ್ಕಂತಾಗುತ್ತದೆ. ಕಳೆದ ವರ್ಷದಂತೆ ಈ ವರ್ಷ ಸಹ ಅತ್ಯಂತ ಸರಳ ದಸರಾ ನಡೆಯುತ್ತಿದೆ.
ಆದ್ದರಿಂದ ದೀಪಾಲಂಕಾರವನ್ನಾದರೂ ವಿಸ್ತರಿಸಬೇಕು ಎಂದು ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಒತ್ತಾಯಿಸಿದ್ದಾರೆ.