ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣಸಹಿತ ನಟಿಯರಿಗೆ ತಟ್ಟಿದ್ದ ಡೀಪ್ ಫೇಕ್ ವಿಡಿಯೋ ಬಿಸಿ ಇದೀಗ ಪ್ರಧಾನಿ ಮೋದಿಯವರಿಗೂ ತಟ್ಟಿದೆ.
ಇತ್ತೀಚೆಗೆ ಗರ್ಬಾ ನೃತ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಎಐ ತಂತ್ರಜ್ಞಾನದ ಮೂಲಕ ಪ್ರಧಾನಿ ಮೋದಿಯನ್ನು ಸೃಷ್ಟಿಸಿ ಅವರೇ ಹೆಜ್ಜೆ ಹಾಕಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು.
ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಯ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಅವರು, ವಿಡಿಯೋದಲ್ಲಿರುವುದು ನಾನಲ್ಲ, ತಂತ್ರಜ್ಞಾನದ ಮೂಲಕ ನನ್ನನ್ನು ಹಾಗೆ ಸೃಷ್ಟಿಸಲಾಗಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.
“ನಾನು ಗಾರ್ಬಾ ಆಡುತ್ತಿರುವ ವೀಡಿಯೊವನ್ನು ನೋಡಿದೆ, ಕೃತಕ ಬುದ್ಧಿಮತ್ತೆಯ (ಎಐ) ಯುಗದಲ್ಲಿ, ಡೀಪ್ ಫೇಕ್ ಗಳು ಹರಡುವ ವಿಧಾನವು ದೊಡ್ಡ ಬಿಕ್ಕಟ್ಟಾಗಿದೆ. ಸಮಾಜದಲ್ಲಿ ಅತೃಪ್ತಿಯ ಬೆಂಕಿಯನ್ನು ಬಹಳ ಬೇಗನೆ ಹರಡುವ ಶಕ್ತಿ ಡೀಪ್ ಫೇಕ್ ಗಳಿಗೆ ಇದೆ. ನಮ್ಮ ಕಾರ್ಯಕ್ರಮಗಳ ಮೂಲಕ, ಡೀಪ್ ಫೇಕ್ ಎಂದರೇನು, ಅದು ಎಷ್ಟು ದೊಡ್ಡ ಬಿಕ್ಕಟ್ಟನ್ನು ಉಂಟುಮಾಡಬಹುದು ಮತ್ತು ಅದರ ಪರಿಣಾಮಗಳು ಯಾವುವು ಎಂಬುದರ ಬಗ್ಗೆ ಉದಾಹರಣೆಗಳೊಂದಿಗೆ ಜನರಿಗೆ ಶಿಕ್ಷಣ ನೀಡಿ. ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವುದು ಮಹತ್ವದ್ದಾಗಿದೆ.’ ‘ವೋಕಲ್ ಫಾರ್ ಲೋಕಲ್’ ಕರೆಗೆ ನಮ್ಮ ದೇಶದ ಜನರಿಂದ ಭಾರಿ ಬೆಂಬಲ ಸಿಗುತ್ತಿದೆ ಎಂದರು.