ಕರ್ನಾಟಕದ ಪ್ರತಿ ಕಾರ್ಯಕರ್ತ ನನ್ನ ಜತೆಗಾರ, ನನ್ನ ಪರಮ ಮಿತ್ರ: ಮಹಾ ಸಂಗಮದಲ್ಲಿ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಕಾರ್ಯಕ್ರಮದಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡಿದರು.

ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಬಿಜೆಪಿ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ನನಗೆ ಯಾವಾಗೆಲ್ಲ ದಾವಣಗೆರೆಗೆ ಆಗಮಿಸುವ ಅವಕಾಶ ಸಿಕ್ಕಿದೆಯೋ, ಆಗೆಲ್ಲ ನಿಮ್ಮ ಆಶೀರ್ವಾದ ಹೆಚ್ಚುತ್ತಲೇ ಇದೆ. ಇಂದು ಕಾರ್ಯಕ್ರಮವನ್ನು ಈ ರೀತಿ ರೂಪಿಸಿರುವುದಕ್ಕೆ ಕರ್ನಾಟಕ ಬಿಜೆಪಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಇಲ್ಲಿ ಜೀವನ ನಡೆಸುತ್ತಿರುವ ತ್ಯಾಗ, ತಪಸ್ಸಿನಿಂದ ತುಂಬಿರುವ ನಿಮ್ಮೆಲ್ಲರ ದರ್ಶನ ಮಾಡುವುದು ನನ್ನ ಸೌಭಾಗ್ಯ. ವಿಜಯ ಮಹೋತ್ಸವದಂತೆ ಈ ವಿಜಯ ಸಂಕಲ್ಪ ರ‍್ಯಾಲಿ ಕಾಣುತ್ತಿದೆ. ವಿಶೇಷವೆಂದರೆ, ಒಂದೆಡೆ ವಿಜಯ ಸಂಕಲ್ಪ ರ‍್ಯಾಲಿ ಆಗುತ್ತಿದೆ, ಮತ್ತೊಂದೆಡೆ ಕರ್ನಾಟಕದ ಕಲಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷರ ಕರ್ಮಭೂಮಿಯಲ್ಲಿ ಬಿಜೆಪಿಯ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷರ ಮನೆಯಲ್ಲಿ ಬಿಜೆಪಿ ವಿಜಯ ಯಾತ್ರೆ ನಡೆಸಿದೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸಂಕೇತ ಎಂದರು.

ಕರ್ನಾಟಕದಲ್ಲಿ ಡಬಲ್‌ ಇಂಜಿನ್‌ ಸರ್ಕಾರಕ್ಕೆ ಜನರ ಆಶೀರ್ವಾದವಿದೆ. ಇಂದು ಈ ಕಾರ್ಯಕ್ರಮ ನಡೆಯುತ್ತಿರುವ ಸ್ಥಳವು ದಾವಣಗೆರೆ ಹಾಗೂ ಹರಿಹರದ ನಡುವೆ ಇದೆ. ತಾಯಿ ತುಂಗಭದ್ರೆ, ಹರಿಹರೇಶ್ವರರ ಆಶೀರ್ವಾದವಿದೆ. ನಾಲ್ಕು ವಿಜಯ ಸಂಕಲ್ಪ ಯಾತ್ರೆಗಳ ಮಹಾ ಸಂಗಮವಾಗುತ್ತಿದೆ. ಯಾತ್ರೆ ಮಾಡಿ ಬಂದವರ ದರ್ಶನ ಮಾಡಬೇಕು. ಇಂದು ನಿಮ್ಮ ದರ್ಶನ ಮಾಡಿ ನಮಗೂ ಪುಣ್ಯ ಲಭಿಸಿದೆ. ಈ ಸಫಲ ಯಾತ್ರೆಗಳಿಗೆ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಹೇಳಿದರು.

ನಾನು ಯಾತ್ರೆ ಕುರಿತು ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದೆ. ಈ ಯಾತ್ರೆಗಳಲ್ಲಿ ಲಭಿಸಿರುವ ವಿಶ್ವಾಸ, ಸಮರ್ಥನೆಯು ಅದ್ಭುತವಾಗಿದೆ. ಆದರೆ ನಮ್ಮ ಹೊಣೆ ಈಗ ಆರಂಭವಾಗಿದೆ. ಈ ಯಾತ್ರೆಯಲ್ಲಿ ಸಿಕ್ಕಿರುವ ಉತ್ಸಾಹ ಹಾಗೂ ಜನಸಮರ್ಥನೆಯನ್ನು ಪ್ರತಿ ಬೂತ್‌ಗೆ ತಲುಪಿಸಬೇಕು. ಪ್ರತಿ ಬೂತ್‌ ಗೆಲ್ಲುವ ಸಂಕಲ್ಪ ಮಾಡುತ್ತೀರ? ಎಂದು ಕಾರ್ಯಕರ್ತರಲ್ಲಿ ಕೇಳಿದರು.

ಬಳಿಕ ಮಾತನಾಡಿದ ಮೋದಿ, ತುಮಕೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕಾರ್ಯಕರ್ತನೊಬ್ಬನ ಕಪಾಳಕ್ಕೆ ಹೊಡೆಯುವ ವಿಡಿಯೋವನ್ನು ಉಲ್ಲೇಖಿಸಿದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಒಂದು ವಿಡಿಯೋ ನೋಡುತ್ತಿದ್ದೆ. ಒಂದು ಪಕ್ಷದ ದೊಡ್ಡ ನಾಯಕ, ಮಾಜಿ ಮುಖ್ಯಮಂತ್ರಿ, ತಮ್ಮದೇ ಪಕ್ಷದ ಕಾರ್ಯಕರ್ತರ ಕಪಾಳಕ್ಕೆ ಹೊಡೆದದ್ದು ಆ ವಿಡಿಯೊ. ತಮ್ಮ ಕಾರ್ಯಕರ್ತನನ್ನೇ ಗೌರವಿಸಲು ಆಗದವರು ಜನತಾ ಜನಾರ್ದನನ ಗೌರವ ಹೇಗೆ ಮಾಡುತ್ತಾರೆ? ಬಿಜೆಪಿಯಲ್ಲಿ ಯಾರೂ ದೊಡ್ಡವರಲ್ಲ, ಚಿಕ್ಕವರಿಲ್ಲ. ನಾವೆಲ್ಲರೂ ಸಮಾನರು. ಹಾಗಾಗಿ ನಿಮ್ಮೆಲ್ಲರ ದರ್ಶನ ಪಡೆಯುವುದು ನನ್ನ ಸೌಭಾಗ್ಯ ಎಂಬ ಭಾವನೆ ಮೂಡುತ್ತದೆ. ಕರ್ನಾಟಕದ ಪ್ರತಿ ಕಾರ್ಯಕರ್ತ ನನ್ನ ಜತೆಗಾರ, ನನ್ನ ಪರಮ ಮಿತ್ರ ನನ್ನ ಸಹೋದರ ಇದ್ದಂತೆ ಎಂದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!