ಹೊಸ ದಿಗಂತ ವರದಿ, ಚಿತ್ರದುರ್ಗ:
ಕ್ಷೇತ್ರ ವ್ಯಾಪ್ತಿಯ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಸರ್ಕಾರಿ ಶಾಲೆ ದತ್ತು ಪಡೆದು, ಅಭಿವೃದ್ಧಿ ಮಾಡಲಾಗುವುದು ಎಂದು
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ತಿಳಿಸಿದರು.
ವೈ.ಎ.ಎನ್. ಬಳಗದ ವತಿಯಿಂದ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಬಿಜೆಪಿ ಪಕ್ಷದ ಹಲವು ಬಂಡಾಯ ಅಭ್ಯರ್ಥಿಗಳು ನನ್ನ ವಿರುದ್ಧವಾಗಿ ಸ್ಪರ್ಧಿಸಿದ್ದರು. ಆದರೂ ಮತದಾರರು ನನ್ನ ಮೇಲೆ ಅಭಿಮಾನವಿಟ್ಟು ನನ್ನನ್ನು ಗೆಲ್ಲಿಸಿದರು. ಹಾಗಾಗಿ ನಾನು ಮತದಾರರಿಗೆ ಆಬಾರಿಯಾಗಿದ್ದೇನೆ ಎಂದರು.
ನನ್ನ ಕ್ಷೇತ್ರದ ಬಹುತೇಕ ಜಿಲ್ಲೆಗಳು ಹಿಂದುಳಿದವುಗಳಾಗಿವೆ. ಹಾಗಾಗಿ ಅಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಹಾಗಾಗಿ ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಮುಂದಾಗಿದೆ. ಅದರಂತೆ ನನ್ನ ಕ್ಷೇತ್ರದ ವ್ಯಾಪ್ತಿಯ ಪ್ರತಿ ಜಿಲ್ಲಾ ಕೇಂದ್ರದಲ್ಲಿ ತಲಾ ಒಂದೊಂದು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಆ ಮೂಲಕ ಯುಪಿಎಸ್ಸಿ, ಕೆಪಿಎಸ್ಸಿ ಸ್ಪರ್ಧಾತ್ಮನಕ ಪರೀಕ್ಷೇಗಳಿಗೆ ಸೂಕ್ತ ತರಬೇತಿ ಕೊಡಿಸಲಾಗುವುದು ಎಂದು ಹೇಳಿದರು.
ಮತ್ತೋರ್ವ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಆರೋಗ್ಯದ ದೃಷ್ಠಿಯಿಂದ ಆರೋಗ್ಯ ವಿಮೆ ಜಾರಿ ಮಾಡಿ ಆರೋಗ್ಯ ಕಾರ್ಡ್ಗಳನ್ನು ನೀಡಲಾಗುವುದು. ಏಪ್ರಿಲ್ ಆರಂಭದಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. 2008 ರಿಂದ ಶಿಕ್ಷಕರ ವರ್ಗಾವಣೆಯಲ್ಲಿ ತೊಂದರೆ ಉಂಟಾಗಿದೆ. ಹಾಗಾಗಿ ಶಿಕ್ಷಣ ಸ್ನೇಹಿ ವರ್ಗಾವಣೆ ಕಾಯಿದೆ ಜಾರಿ ಮಾಡಲಾಗಿದೆ ಎಂದರು.
ವರ್ಗಾವಣೆಗೆ 70 ಸಾವಿರ ಅರ್ಜಿಗಳು ಬಂದಿದ್ದು, ಒಂದೇ ವರ್ಷದಲ್ಲಿ ೫೫ ಸಾವಿರ ಶಿಕ್ಷಕರಿಗೆ ವರ್ಗಾವಣೆ ನೀಡಲಾಗಿತ್ತು. ಆದರೆ ಕೆಲವರು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಶೀಘ್ರದಲ್ಲೇ ಅದನ್ನು ನಿವಾರಿಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಎನ್ಪಿಎಸ್ ಪದ್ಧತಿ ತೆಗೆದು ಹಾಕುವ ಕುರಿತು ಸರ್ಕಾರದ ಜೊತೆ ಮಾತನಾಡಲಾಗಿದೆ. ವೇತನ ತಾರತಮ್ಯ ನಿವಾರಣೆ ಕಾಲ್ಪನಿಕ ಬಡ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಚಿದಾನಂದಗೌಡ ಹಾಗೂ ಇಬ್ಬರೂ ಜೋಡೆತ್ತುಗಳಂತೆ ಕೆಲಸ ಮಾಡಿ ಶಿಕ್ಷಕರ ಹಿತ ಕಾಯುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ. ನಂತರ ಎಲ್ಲರೂ ನಮ್ಮವರೇ. ಮತ ಹಾಕಿದವರು, ಹಾಕದಿರುವವರು ಎಂದು ತಾರತಮ್ಯ ಮಾಡಬಾರದು. ಎಲ್ಲರೂ ನಮ್ಮ ಕ್ಷೇತ್ರದ ಮತದಾರರು ಎಂಬ ಮನೋಭಾವದಿಂದ ಕೆಲಸ ಮಾಡಬೇಕು. ವೈ.ಎ.ಎನ್. ಅಭಿಮಾನಿ ಬಳಗದ ಸದಸ್ಯರ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು. ಮತ ಹಾಕದ ಶಿಕ್ಷಕರನ್ನು ಹತ್ತಿರ ಕರೆದು ಕೆಲಸ ಮಾಡಿಕೊಡಬೇಕು. ಆ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವೈ.ಎ.ನಾರಾಯಣಸ್ವಾಮಿ ಹಾಗೂ ಚಿದಾನಂದಗೌಡ ಅವರನ್ನು ಅಭಿನಂದಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಯುವಮೋರ್ಚ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ ಹಾಜರಿದ್ದರು.