Friday, June 2, 2023

Latest Posts

ಪ್ರತಿಯೊಬ್ಬರೂ ಲಸಿಕೆ ಪಡೆದುಕೊಂಡು ಲಾಕ್‌ಡೌನ್ ಅನ್ನು ತಪ್ಪಿಸಬೇಕು: ಸಚಿವ ಆರಗ ಜ್ಞಾನೇಂದ್ರ ಕರೆ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಕೊರೋನಾ ಮೂರನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಪಡೆದುಕೊಂಡು ಮತ್ತೊಮ್ಮೆ ಲಾಕ್‌ಡೌನ್ ಕಡೆಗೆ ಹೋಗುವುದನ್ನು ತಪ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ನೀಡಿದರು.
ಅವರು ಸೋಮವಾರ ಜಿ.ಪಂ.ಸಭಾಂಗಣದಲ್ಲಿ ೧೫ ವರ್ಷ ಮೇಲ್ಪಟ್ಟ, ೧೮ ವರ್ಷದೊಳಗಿನ ಮಕ್ಕಳಿಗೆ ಹಮ್ಮಿಕೊಳ್ಳಲಾಗಿರುವ ಕೊವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂರನೇ ಅಲೆ ಬರುವುದೇ ಇಲ್ಲ ಎಂದು ಭಾವಿಸಿದ್ದೆವು. ಆದರೆ ಈಗಾಗಲೇ ಅಕ್ಕಪಕ್ಕದ ರಾಜ್ಯಗಳಲ್ಲಿ ಸೋಂಕು ಹರಡುತ್ತಿದೆ. ನಿನ್ನೆ ಬೆಂಗಳೂರೊಂದರಲ್ಲೇ ೯೦೦ ರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ. ಮತ್ತೊಮ್ಮೆ ಲಾಕ್‌ಡೌನ್ ಕಡೆಗೆ ಹೋಗಬೇಕಾಗುತ್ತದೆ ಎನ್ನುವ ಸೂಚನೆ ನೀಡಿದ್ದಾರೆ ಎಂದರು.
ಲಾಕ್‌ಡೌನ್‌ನಿಂದ ಆರ್ಥಿಕವಾಗಿ ದೇಶ ಭಾರೀ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಡೀ ವ್ಯವಸ್ಥೆ ಸ್ತಬ್ಧಗೊಂಡು ಕೆಳ ಸ್ಥರದ ಜನ ನಿರುದ್ಯೋಗಿಗಳಾಗುತ್ತಾರೆ. ಇಂತಹ ಸಂದರ್ಭವನ್ನು ತಪ್ಪಿಸಬೇಕು ಎಂದರೆ ಕೇವಲ ಆರೋಗ್ಯ ಇಲಾಖೆ, ಸರ್ಕಾರದಿಂದ ಮಾತ್ರ ಸಾಧ್ಯ ಎನ್ನುವ ಭಾವನೆ ಬೇಡ. ಸಾರ್ವಜನಿಕರೆಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜನರು ಜಾಗೃತರಾಗಿ ನಮ್ಮನ್ನು ನಾವು ರಕ್ಷಣೆ ಮಾಡಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಸಾಕಷ್ಟು ನಿಯಂತ್ರಣ ಸಾಧ್ಯವಿದೆ. ಕಳೆದ ಎರಡು ಅಲೆಯಲ್ಲಿ ಸಾಕಷ್ಟು ಜೀವಗಳನ್ನು ಕಳೆದುಕೊಂಡಿದ್ದೇವೆ. ಶೈಕ್ಷಣಿಕ ವ್ಯವಸ್ಥೆ ಕುಸಿದುಹೋಗಿದೆ. ಇನ್ನೂ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಇಲ್ಲಿನ ಜಿಲ್ಲಾಡಳಿತ, ಆರೋಗ್ಯಾಧಿಕಾರಿಗಳ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಲಸಿಕೆ ಹಾಕಿಸುವಲ್ಲೂ ಉತ್ತಮ ಸಾಧನೆ ಮಾಡಿದೆ. ಈಗಲೂ ಎಲ್ಲಾ ಮಕ್ಕಳು ತಪ್ಪಿಸಿಕೊಳ್ಳದೆ ಲಸಿಕೆ ಪಡೆಯಬೇಕು. ಲಸಿಕೆ ಪಡೆದರೆ ಜ್ವರವೂ ಬರುವುದಿಲ್ಲ ಎಂದರು.
ಈಗಾಗಲೇ ಅತೀದೊಡ್ಡ ಶ್ರೀಮಂತ ರಾಷ್ಟ್ರವಾದ ಅಮೇರಿಕಾದಲ್ಲಿ ಕೇವಲ ೩೫ ಕೊಟಿ ಜನಸಂಖ್ಯೆ ಇದ್ದರೂ ಅಲ್ಲಿ ಕೋವಿಡ್ ನಿಯಂತ್ರಣಕ್ಕೆ ತರಲು ಸಾದ್ಯವಾಗಿಲ್ಲ. ಮೂರನೇ ಅಲೆ ಕೂಡಲೇ ವಿಚಿತ್ರವಾಗಿ ಸ್ಫೋಟಗೊಂಡು ಆದೇಶದ ಪರಿಸ್ಥಿತಿ ಏನು ಎನ್ನುವುದನ್ನು ನೋಡುತ್ತಿದ್ದೇವೆ.
ಕಡಿಮೆ ಜನಸಂಖ್ಯೆ ಇರುವ ದೇಶಗಳಲ್ಲಿ ಆಗಿರುವ ಕೋವಿಡ್ ಸಾವು ನೋವುಗಳನ್ನು ಗಮನಿಸಿದರೆ ನಮ್ಮಲ್ಲಿ ಅತೀ ದೊಡ್ಡ ಅನಾಹುತ ಸಂಭವಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೇಂದ್ರ ಸರ್ಕಾರ ಇದನ್ನು ಅತ್ಯಂತ ಯಶಸ್ವಿಯಾಗಿ ನಿಯಂತ್ರಿಸಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೋಟಿ ಕೋಟಿ ನಮಸ್ಕಾರ ಹೇಳಬೇಕಾಗುತ್ತದೆ
ಇಡೀ ದೇಶದಲ್ಲಿ ಬೆರಳೆಣಿಕೆ ಲ್ಯಾಬ್‌ಗಳಿತ್ತು, ನಮ್ಮ ರಾಜ್ಯದಲ್ಲಿ ಕೇವಲ ಒಂದೆರಡು ಲ್ಯಾಬ್‌ಗಳು ಮಾತ್ರ ಇದ್ದವು. ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನಗಳನ್ನು ದಾಟುತ್ತಿದ್ದೇವಾದರೂ ಆಕ್ಸಿಜನ್ ಸರಬರಾಜು ಇರಲೇ ಇಲ್ಲ. ಮೊದಲನೇ ಆಲೆಯಲ್ಲಿ ಮಾಸ್ಕ್‌ಗಳಿಲ್ಲದೆ ಚೀನಾದಿಂದ ತರಿಸಿಕೊಳ್ಳಬೇಕಾಯಿತು. ಇಂತಹ ಕೆಟ್ಟ ವಾತಾವರಣದಲ್ಲಿ ನಮ್ಮ ಇಡೀ ಜನ ಕೈಜೋಡಿಸಿ ಸಕಾರದ ಜೊತೆಗೆ ನಿಂತರು, ಆರೋಗ್ಯ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮಾಡಿದ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.
ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಕೊರೋನಾ ನಿರ್ಮೂಲನೆಗೆ ಸಾಕಷ್ಟು ಜಾಗೃತಿ ಕಾರ್ಯವನ್ನು ಮಾಡಿದೆ. ಸಾರ್ವಜನಿಕರಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಲಸಿಕೆ ಪಡೆಯದೇ ಇದ್ದಲ್ಲಿ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್ ಪ್ರಸ್ತಾವಿಕವಾಗಿ ಮಾತನಾಡಿ, ಈಗಾಗಲೇ ೧೮ ವರ್ಷ ಮೇಲ್ಪಟ್ಟ ಜಿಲ್ಲೆಯ ಶೇ.೯೭ ಜನರಿಗೆ ಮೊದಲ ಡೋಸ್ ಹಾಗೂ ಶೇ.೮೧ ರಷ್ಟು ಎರಡನೇ ಹಂತದ ಲಸಿಕಾಕರಣ ಮಾಡಲಾಗಿದೆ. ಇದೀಗ ೧೫ ವರ್ಷ ಮೇಲ್ಪಟ್ಟು ೧೮ ವರ್ಷದೊಳಗಿನ ೪೮೭೦೭ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಶಾಲೆಗಳಿಗೆ ತೆರಳಿ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಶಾಲೆಯಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದವರು, ಶಾಲೆ ಬಿಟ್ಟವರು ಇದ್ದಲ್ಲಿ ಹತ್ತಿರದ ಆಸ್ಪತ್ರೆಗಳಲ್ಲಿ ನಿಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿ.ಪಂ. ಸಿಇಓ ಜಿ.ಪ್ರಭು, ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್, ಆರ್‌ಸಿಹೆಚ್ ಡಾ.ಭರತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!