Monday, July 4, 2022

Latest Posts

ಪರೀಕ್ಷೆ ರಣಾಂಗಣವಲ್ಲ, ಕ್ರೀಡಾಂಗಣ: ಸಚಿವ ಎಸ್.ಸುರೇಶ್‌ಕುಮಾರ್

ಹೊಸ ದಿಗಂತ ವರದಿ, ಚಿತ್ರದುರ್ಗ:

ಈ ಬಾರಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಕರ್ನಾಟಕ ರಾಜ್ಯದ ಮಕ್ಕಳ ಹಬ್ಬ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಬಣ್ಣಿಸಿದರು.
ನಗರದ ಜಿ.ಪಂ. ಸಂಭಾಂಗಣದಲ್ಲಿ ಗುರುವಾರ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜೂನ್ 21 ರಿಂದ ಎಸ್‌ಎಸ್‌ಎಲ್‌ಸಿ ಹಾಗೂ ಮೇ 24 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ವಿವಿಧ ಇಲಾಖೆಗಳು ಕಳೆದ ವರ್ಷದ ಪರೀಕ್ಷೆಗೆ ಸಹಕಾರ ನೀಡಿದ್ದವು. ಅದರಂತೆ ಈಗಲೂ ಮುಂದೆ ಬಂದಿವೆ. ವಿವಿಧ ಸಂಘ ಸಂಸ್ಥೆಗಳು ಸಹ ಕೈಜೋಡಿಸಿವೆ. ಕೆಲವು ಜನಪ್ರತಿನಿಧಿಗಳು ಸಹ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಈ ವರ್ಷ 8,75,798 ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ 27,595 ಮಕ್ಕಳು ಹೆಚ್ಚಿದ್ದಾರೆ. 701651 ಮಕ್ಕಳು ದ್ವಿತೀಯ ಪಿಯುಸಿ ಬರೆಯಲಿದ್ದಾರೆ. ಕಳೆದ ವರ್ಷಕ್ಕಿಂದ ಈ ಬಾರಿ 26,374 ಮಕ್ಕಳು ಹೆಚ್ಚಾಗಿದ್ದಾರೆ. ಮಕ್ಕಳು ಸಹ ಪರೀಕ್ಷೆ ದೃಷ್ಠಿಯಿಂದ ತಮ್ಮದೇ ಆದ ರೀತಿಯಲ್ಲಿ ತಯಾರಿ ನಡೆಸಿದ್ದಾರೆ. ಮಕ್ಕಳ ಶಿಕ್ಷಣದ ದೃಷ್ಠಿಯಿಂದ ಖಾಸಗಿ ವಾಹಿನಿಗಳು, ಚಂದನವಾಹಿನಿ, ಇನ್‌ಫೋಸಿಸ್ ಸಂಸ್ಥೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಹಲವು ರೀತಿಯ ಸಹಕಾರ ನೀಡಿದವು ಎಂದು ಸ್ಮರಿಸಿದರು.
ಮಕ್ಕಳ ಶೈಕ್ಷಣಿಕ ನಾಳೆಗೆ ಪರೀಕ್ಷೆ ನಡೆಸಲಾಗುತ್ತಿದೆಯೇ ವಿನಃ ಪ್ರತಿಷ್ಠೆಗಲ್ಲ. ಹಾಗಾಗಿ ಎಲ್ಲಾ ರೀತಿಯ ಅಗತ್ಯ ರಕ್ಷಣಾ ಕ್ರಮಗಳನ್ನು ಅನುಸರಿಸುವ ಮೂಲಕ ಪರೀಕ್ಷೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ನಡೆದ ಪರೀಕ್ಷಾ ಕೇಂದ್ರಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸುಇವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಪರೀಕ್ಷಾ ದೃಷ್ಠಿಯಿಂದ ಶೇಕಡಾ 30 ರಷ್ಟು ಪಠ್ಯ ಕಡಿತ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳ ಮೇಳೆ ಒತ್ತಡ ಹಾಕಬಾರದು. ಪರೀಕ್ಷೆ ಕ್ರೀಡಾಂಗಣ, ರಣರಂಗ ಅಲ್ಲ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಮಾಡುವ ಮೂಲಕ ಶಿಕ್ಷಣ ಇಲಾಖೆ ಅಧಿಕಾರಿಗಳು ಜೊತೆ ಸಭೆ ನಡೆಸಿ ಚರ್ಚಿಸಲಾಗಿದೆ. ಈಗಾಗಲೇ 16 ಜಿಲ್ಲೆಗಳ ಪರೀಕ್ಷಾ ಸಿದ್ಧತೆ ಕುರಿತು ಪರಿಶೀಲಿಸಲಾಗಿದೆ. ನಾಳೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಪರೀಕ್ಷಾ ಸಿದ್ಧತೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಯಾವುದೇ ಒಂದು ಮಗು ಪರೀಕ್ಷೆಯಿಂದ ವಂಚಿತವಾಗಬಾರದು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಬಸ್ ಓಡಿಸದಿದ್ದ ಸಂದರ್ಭದಲ್ಲೂ ಸರ್ಕಾರ ಸಾರಿಗೆ ನೌಕರರಿಗೆ ಸಂಬಳ ನೀಡಿದೆ. 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಲಾಗಿದೆ. ಆದಾಗ್ಯೂ ಸಾರಿಗೆ ನೌಕರರು ಮುಷ್ಕರ ಮಾಡುವುದು ಸರಿಯಲ್ಲ. ಪ್ರಸ್ತುತ ಕೋವಿಡ್ ಎಲ್ಲೆಡೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲ. ಹಾಗಾಗಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ. ಬೇಡಿಕೆಗಳ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಒ ಡಾ.ಕೆ.ನಂದನಿದೇವಿ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss