Wednesday, August 10, 2022

Latest Posts

ಆಮ್ಲಜನಕದ ಲೆಕ್ಕಪರಿಶೋಧನೆ ಶುರುವಾಗುತ್ತಲೇ ಹೆಚ್ಚುವರಿ ಆಕ್ಸಿಜನ್ ಲೆಕ್ಕ ಕೊಟ್ಟ ಕೇಜ್ರಿವಾಲ್ ಸರ್ಕಾರ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಾರಗಳ ಹಿಂದೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮೆಡಿಕಲ್ ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿದಂತೆ ಕೋಲಾಹಲವೇ ಎದ್ದಿತ್ತು. ತನ್ನ ಪಾಲಿನ ಆಮ್ಲಜನಕವನ್ನು ಕೇಂದ್ರವು ಸರಿಯಾಗಿ ಪೂರೈಸದೇ ಇರುವುದೇ ಸೋಂಕಿತರಿಗೆ ಆಕ್ಸಿಜನ್ ಸಿಗದೇ ಇರುವುದಕ್ಕೆ ಕಾರಣ ಎಂಬುದು ಕೇಜ್ರಿವಾಲ್ ಸರ್ಕಾರದ ದೂರಾಗಿತ್ತು. ಆದರೆ, ಸಮಸ್ಯೆ ಇರುವುದು ಪೂರೈಕೆಯಲ್ಲಲ್ಲ, ದೆಹಲಿ ಸರ್ಕಾರದ ನಿರ್ವಹಣೆಯಲ್ಲಿ ಎಂಬುದು ಕೇಂದ್ರದ ವಾದವಾಗಿತ್ತು. ಇದರಲ್ಲಿ ಕೋರ್ಟ್ ಸಹ ಮಧ್ಯಪ್ರವೇಶಿಸಿತ್ತು.
ಯಾವಾಗ ಸುಪ್ರೀಂಕೋರ್ಟ್ ಅಡಿಟ್ ಗೆ ಮುಂದಾಯಿತೋ, ಅದಾಗಿ ಒಂದು ದಿನದಲ್ಲೇ ದೆಹಲಿ ಸರ್ಕಾರ ತನಗೆ ಬೇಕಿರುವುದು ಪ್ರತಿದಿನ ಕೇವಲ 582 ಮೆಟ್ರಿಕ್ ಟನ್ ಆಮ್ಲಜನಕ, ಹೀಗಾಗಿ ಹೆಚ್ಚುವರಿಯಾಗಿರುವುದನ್ನು ಉಳಿದ ರಾಜ್ಯಗಳಿಗೆ ನೀಡುತ್ತೇವೆ ಎಂದು ಘೋಷಣೆ ಮಾಡಿದೆ.

ಈ ಘೋಷಣೆ ಬಹಳಷ್ಟು ಜನರ ಹುಬ್ಬೇರುವಂತೆ ಮಾಡಿದೆ. ಏಕೆಂದರೆ, ಏಪ್ರಿಲ್ 18ರ ಹೊತ್ತಿಗೆ ದೆಹಲಿಯಲ್ಲಿ 74,000 ಸಕ್ರಿಯ ಕೇಸುಗಳಿದ್ದಾಗ 700 ಮೆಟ್ರಿಕ್ ಟನ್ ಆಮ್ಲಜನಕ ಪ್ರತಿದಿನ ಬೇಕು ಎಂದು ಅರವಿಂದ ಕೇಜ್ರಿವಾಲರು ಕೇಂದ್ರಕ್ಕೆ ಪತ್ರ ಬರೆದಿದ್ದರು. ಪ್ರಸ್ತುತ ದೆಹಲಿಯಲ್ಲಿ 82,000 ಸಕ್ರಿಯ ಪ್ರಕರಣಗಳಿವೆ. ಹೀಗಿರುವಾಗ ಏಕಾಏಕಿ ಆಕ್ಸಿಜನ್ ಬೇಡಿಕೆ ಕಡಿಮೆ ಆಗಿದ್ದಾದರೂ ಹೇಗೆ? ಅಂದರೆ ಈ ಮೊದಲು, ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕೆ ವ್ಯವಸ್ಥಿತವಾಗಿ ಕೃತಕ ಕೊರತೆ ಸೃಷ್ಟಿಸಲಾಗಿತ್ತೇ ಎಂಬ ಪ್ರಶ್ನೆಗಳೆದ್ದಿವೆ.

ದೆಹಲಿ ಸರ್ಕಾರದ ನಿರಂತರ ಆರೋಪಗಳಿಂದ ಬೇಸತ್ತಿದ್ದ ಕೇಂದ್ರ ಸರ್ಕಾರ, ಮೇ 7ರಂದು ಆಕ್ಸಿಜನ್ ಬಳಕೆಯ ಅಡಿಟ್ ಮಾಡುವಂತೆ ಸುಪ್ರೀಂಕೋರ್ಟನ್ನು ಕೇಳಿಕೊಂಡಿತು. ಕೊರೊನಾದಿಂದ ಅತಿಪೀಡಿತವಾಗಿರುವ ಮಹಾರಾಷ್ಟ್ರಕ್ಕೆ 500-600 ಮೆಟ್ರಿಕ್ ಟನ್ನುಗಳಲ್ಲೇ ಪರಿಸ್ಥಿತಿ ನಿಭಾಯಿಸುವುದು ಸಾಧ್ಯವಾಗುತ್ತಿರುವಾಗ ದೆಹಲಿಯಲ್ಲಿ ಅಸಹಜ ಬೇಡಿಕೆ ಬರುತ್ತಿರುವುದೇಕೆ ಎಂಬುದು ಕೇಂದ್ರದ ಪ್ರಶ್ನೆಯಾಗಿತ್ತು. ಇಂಥದೊಂದು ಆಕ್ಸಿಜನ್ ಅಡಿಟ್ ಪ್ರಸ್ತಾವವನ್ನು ದೆಹಲಿ ಸರ್ಕಾರ ಕೋರ್ಟಿನಲ್ಲಿ ವಿರೋಧಿಸಿತಾದರೂ ಸುಪ್ರೀಂಕೋರ್ಟ್ ಅಡಿಟ್ ಮಾಡುವುದಕ್ಕೆ ಕಾರ್ಯಪಡೆಯೊಂದನ್ನು ರಚಿಸಿತು.

ದೆಹಲಿ ಆಕ್ಸಿಜನ್ ನಿರ್ವಹಣೆ ಬಗ್ಗೆ ಮೊದಲಿನಿಂದಲೂ ಅನುಮಾನಗಳಿದ್ದವು. ಕೇಂದ್ರವನ್ನು ದೂಷಿಸುವುದರಲ್ಲೇ ಮಗ್ನರಾಗಿದ್ದ ಕೇಜ್ರಿವಾಲ್ ಸರ್ಕಾರದ ಬಳಿ ಪೂರೈಕೆಯಾದ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ವಿತರಿಸುವುದಕ್ಕೆ ಬೇಕಾದ ಟ್ಯಾಂಕರುಗಳ ವ್ಯವಸ್ಥೆಯನ್ನೂ ಮಾಡಲಾಗಲಿಲ್ಲ.
ಈ ನಡುವೆ ದೆಹಲಿ ಪೊಲೀಸರು ಆಕ್ಸಿಜನ್ ಕಾನಸಂಟ್ರೇಟರ್ ಮತ್ತು ಸಿಲಿಂಡರುಗಳನ್ನು ಅಕ್ರಮವಾಗಿ ಶೇಖರಿಸಿಟ್ಟುಕೊಂಡಿದ್ದ ಹಲವು ಅಡ್ಡೆಗಳ ಮೇಲೆ ದಾಳಿ ಮಾಡಿದರು. ಅಂಥ ಬೃಹತ್ ಜಾಲವೊಂದರ ಆರೋಪಿಯಾಗಿ ಪೊಲೀಸರ ವಶದಲ್ಲಿರುವ ನವನೀತ್ ಕಾಲ್ರಾ ಎಂಬ ಉದ್ಯಮಿಯನ್ನು ಆಪ್ ಸರ್ಕಾರವು ಈ ಹಿಂದೆ ದೆಹಲಿಯ ನಿರ್ಮಾತಾ ಎಂಬ ಪ್ರಶಸ್ತಿ ಸರಣಿಯಲ್ಲಿ ಗೌರವಿಸಿತ್ತಲ್ಲದೇ, ಕೇಜ್ರಿವಾಲರ ಪ್ರಮಾಣ ವಚನ ಸಮಾರಂಭಕ್ಕೂ ಆಹ್ವಾನಿತರಲ್ಲೊಬ್ಬರಾಗಿಸಿತ್ತು ಎಂಬುದಿಲ್ಲಿ ಗಮನಾರ್ಹ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss