ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿದ್ರೆ ನೀರು ಬದಲು ಈ ಪೌಡರ್​ ಬಳಸಿ ಎಂದ ತಜ್ಞರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡಿನ ಹೊಸೂರು ಪ್ರದೇಶದಲ್ಲಿ ಎಲೆಕ್ಟ್ರಿಕ್ ಬೈಕ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಬಳಿಕ ಮಾಲೀಕ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೂ ಕೆಲವೇ ನಿಮಿಷಗಳಲ್ಲಿ ಭಾರೀ ಸದ್ದಿನೊಂದಿಗೆ ಬೈಕ್​ ಸ್ಫೋಟಗೊಂಡಿದೆ.ಈ ವೇಳೆ ನೀರು ಹಾಕಿದರು ಬೆಂಕಿ ನಂದಿಸಲು ಸಾಧ್ಯವಾಗದೇ ವಾಹನ ಸ್ಪೋಟಗೊಂಡು ಸುಟ್ಟು ಕರಕಲಾದ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸಿತ್ತು.
ಈ ಘಟನೆಯಿಂದ ಜನರಲ್ಲಿ ಎಲೆಕ್ಟ್ರಿಕ್ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಾಗ ಅದನ್ನು ನಂದಿಸುವುದು ಹೇಗೆ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ. ತಜ್ಞರು ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಂಡಾಗ ಅದನ್ನು ನಂದಿಸಲು ಯಾವುದೇ ಸಂದರ್ಭದಲ್ಲೂ ನೀರನ್ನು ಬಳಸಬಾರದು ಎಂದು ಎಚ್ಚರಿಸಿದ್ದಾರೆ.
ಹೌದು, ನೀರು ಸಿಂಪಡಿಸುವಾಗ ಇವಿಗಳ ಬ್ಯಾಟರಿಗಳಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆ ಅಪಘಾತದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂಬುದನ್ನು ಅವರು ವಿಶ್ಲೇಷಿಸುತ್ತಾರೆ.
ಯಾಕೆಂದರೆ ಎಲೆಕ್ಟ್ರಿಕ್ ಕಾರುಗಳು ಮತ್ತು ಬೈಕುಗಳು ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ಚಲಿಸುತ್ತವೆ. ಕೆಲವೊಂದು ಬಾರಿ ಉತ್ಪಾದನಾ ದೋಷಗಳು ಮತ್ತು ದೋಷಯುಕ್ತ ಪ್ಯಾಕೇಜಿಂಗ್, ಬ್ಯಾಟರಿಯ ಅಧಿಕ ತಾಪಕ್ಕೆ ಕಾರಣವಾಗುತ್ತದೆ.
ಹಾಗಾದ್ರೆ ಯಾವುದನ್ನು ಬಳಸಬೇಕು?
ಎಲೆಕ್ಟ್ರಿಕ್​ ವಾಹನಗಳ (EV) ಬ್ಯಾಟರಿಗಳಲ್ಲಿನ ಸಾವಯವ-ಆಧಾರಿತ ವಿದ್ಯುದ್ವಿಚ್ಛೇದ್ಯಗಳು ಆಂತರಿಕ ರಾಸಾಯನಿಕ ಕ್ರಿಯೆಗಳಿಂದಲೂ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಬಹುದು. ಅದು ನೀರಿನೊಂದಿಗೆ ಬೆರೆತಾಗ ಆಗ ಹೈಡ್ರೋಜನ್ ಅನಿಲ ಮತ್ತು ಲಿಥಿಯಂ ಹೈಡ್ರಾಕ್ಸೈಡ್ ಉತ್ಪತ್ತಿಯಾಗುತ್ತದೆ. ಹೈಡ್ರೋಜನ್ ಅನಿಲದ ಸುಡುವ ಸ್ವಭಾವದಿಂದಾಗಿ, ವಾಹನವು ಸ್ಫೋಟಗೊಳ್ಳಬಹುದು.
ಹಾಗಾಗಿ EVಗಳಲ್ಲಿ ಬೆಂಕಿಯನ್ನು ನಂದಿಸಲು ABC ಪೌಡರ್ ಅನ್ನು ಮಾತ್ರ ಬಳಸಬೇಕು ಎಂದು EV ತಜ್ಞರು ಹೇಳುತ್ತಾರೆ.
EV ಬ್ಯಾಟರಿಯ ಮೇಲೆ ABC ಪೌಡರ್ ಸಿಂಪಡಿಸಿದಾಗ ಅದು ಒಂದು ಪದರವನ್ನು ರೂಪಿಸುತ್ತದೆ, ಇದು ಹೆಚ್ಚಿನ ಹಾನಿಯನ್ನು ತಡೆಯುತ್ತದೆ. ಪ್ರಸ್ತುತ ನಗರದ ವಿವಿಧ ಭಾಗಗಳಲ್ಲಿ, ಮುಖ್ಯವಾಗಿ ರಾಣಿಗಂಜ್ ಪ್ರದೇಶದಲ್ಲಿ ಈ ಪುಡಿಯನ್ನು ಮಾರಾಟ ಮಾಡಲಾಗುತ್ತಿದೆ. ಇದು ಇ-ಕಾಮರ್ಸ್ ಸೈಟ್‌ಗಳಲ್ಲಿಯೂ ಲಭ್ಯವಿದೆ.
ಇದು ವಾಣಿಜ್ಯ ಕಟ್ಟಡಗಳು ಮತ್ತು ಕಚೇರಿಗಳ ಗೋಡೆಗಳ ಮೇಲೆ ಕಂಡು ಬರುವ ಪೋರ್ಟಬಲ್ ಫೈರ್ ಸಿಲಿಂಡರ್​ಗಳನ್ನು ಹೋಲುತ್ತದೆ. ಮೊನೊ ಅಮೋನಿಯಂ ಫಾಸ್ಫೇಟ್​ನೊಂದಿಗೆ ಬೆರೆಸಿರುವ ಈ ಪುಡಿ ಸಾಮಾನ್ಯವಾಗಿ ಮಸುಕಾದ ಹಳದಿ ಬಣ್ಣದಲ್ಲಿರುತ್ತದೆ.
ವಿದ್ಯುತ್ ವಾಹನಗಳಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಇಲಾಖೆ ಇನ್ನೂ ವಿಶ್ಲೇಷಿಸಿಲ್ಲ. ಆದರೆ, ಎಲೆಕ್ಟ್ರಿಕ್​ ವಾಹನಗಳಲ್ಲಿನ ಬೆಂಕಿ ನಂದಿಸಲು ನೀರನ್ನು ಬಳಸಬಾರದು. ಬದಲಾಗಿ ಎಬಿಸಿ ಪುಡಿಯನ್ನು ಬಳಸಬಹುದು. ಒಂದು ವೇಳೆ ಎಬಿಸಿ ಪುಡಿ ಲಭ್ಯವಿಲ್ಲದಿದ್ದರೆ ಒಣ ಮರಳನ್ನು ಬೆಂಕಿಯ ಮೇಲೆ ಎಸೆಯಬಹುದು. ಆದರೆ, ಒದ್ದೆಯಾದ ಮರಳನ್ನು ಬಳಸಬಾರದು ಎಂದು ಹೈದರಾಬಾದ್​ನ ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ಶ್ರೀನಿವಾಸ ರೆಡ್ಡಿ ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!