ಹೊಸ ದಿಗಂತ ವರದಿ, ಕಲಬುರಗಿ:
2ಎ ಮೀಸಲಾತಿ ನೀಡಲು ಸರ್ಕಾರಕ್ಕೆ ನೀಡಲಾಗಿದ್ದ ಅವಧಿ ಅಂತ್ಯವಾಗಿರುವ ಹಿನ್ನೆಲೆ ಕಲಬುರಗಿ ನಗರದಲ್ಲಿ ಶ್ರೀ ಜಯಮೃತ್ಯಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಎತ್ತಿನಬಂಡಿ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.
ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎತ್ತಿನಬಂಡಿ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ 2ಎ ಮೀಸಲಾತಿ ಘೋಷಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕೂಡಲ ಸಂಗಮದ ಜಗದ್ಗುರು ಶ್ರೀ ಬಸವ ಜಯಮೃತ್ಯಂಜಯ ಸ್ವಾಮೀಜಿ, ಜನವರಿ 14, 2021ರಂದು 2ಎ ಮೀಸಲಾತಿಗಾಗಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ 712 ಕಿ.ಮೀ ಪಾದಯಾತ್ರೆ ಮತ್ತು 21 ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಧರಣಿ ನಡೆಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು 6 ತಿಂಗಳ ಕಾಲಾವಕಾಶ ಕೇಳಿ 2ಎ ಮೀಸಲಾತಿ ನೀಡುವ ಭರವಸೆ ನೀಡಿದ್ದರು.
ಇದಾದ ಬಳಿಕ ಧರಣಿಯನ್ನು ಕೈಬಿಡಲಾಗಿತ್ತು. ಆದರೀಗ ಭರವಸೆಯಂತೆ 6 ತಿಂಗಳ ಅವಧಿ ಇಂದಿಗೆ ಮುಕ್ತಾಯವಾಗಿದೆ. ಹೀಗಾಗಿ, ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಲಿ. ಸಾಮಾಜಿಕ ನ್ಯಾಯಕ್ಕಾಗಿ ದೀಕ್ಷ ಪಂಚಮಸಾಲಿ ಹಾಗೂ ಲಿಂಗಾಯತ ಒಳಪಂಗಡಗಳಿಗೆ 2ಎ ಮೀಸಲಾದ ಘೋಷಣೆ ಮಾಡಬೇಕು. ಒಂದು ವೇಳೆ 2ಎ ಮೀಸಲಾತಿ ನೀಡದೆ ಮೊಂಡುತನ ಪ್ರದರ್ಶಿಸಿಸಿದರೆ ಅ.1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಉಗ್ರ ಸ್ವರೂಪದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.