ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಆಕ್ಸಿಜನ್, ಅಗತ್ಯ ಔಷಧ ಪೂರೈಕೆ ಸೇರಿದಂತೆ ಕೋವಿಡ್ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಯುವ ಕಾಂಗ್ರೆಸ್ ವಕ್ತಾರ ಶ್ರೀನಿವಾಸ ಬಿವಿ ಅವರನ್ನು ದೆಹಲಿ ಪೊಲೀಸರು 20 ನಿಮಿಷಗಳ ಕಾಲ ಶುಕ್ರವಾರ ಪ್ರಶ್ನೆಗೊಳಪಡಿಸಿದರು. ಇದರ ಬೆನ್ನಲ್ಲೇ ಕಾಂಗ್ರೆಸ್ಸಿನ ವಿವಿಧ ನೇತಾರರು ಮತ್ತು ಮಾಧ್ಯಮದ ಹಲವಾರು ಮಂದಿ ಇದೊಂದು ರಾಜಕೀಯ ಪ್ರೇರಿತ ನಡೆ ಎಂದು ಆರೋಪಿಸಿದರು.
ಕರ್ನಾಟಕದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಇದು ಬಿಜೆಪಿಯ ದ್ವೇಷಪೂರಿತ ನಡೆ ಎಂಬ ಖಂಡನೆಯೊಂದಿಗೆ ಟ್ವೀಟ್ ಮಾಡಿದ್ದಾರೆ.ಕೊವಿಡ್ ಪರಿಹಾರ ಕಾರ್ಯದ ಶ್ರೇಯಸ್ಸು ಕಾಂಗ್ರೆಸ್ಸಿನ ಯುವ ನೇತಾರಗೆ ಸಲ್ಲಿಕೆಯಾಗುತ್ತಿರುವುದನ್ನು ಬಿಜೆಪಿ ಸಹಿಸದೇ ದೆಹಲಿ ಪೊಲೀಸರ ಮೂಲಕ ಇಂಥ ಕ್ರಮಕ್ಕೆ ಮುಂದಾಯಿತೇ? ಸಾಮಾಜಿಕ ಮಾಧ್ಯಮದ ವ್ಯಾಖ್ಯಾನಗಳನ್ನು ಓದುತ್ತಿದ್ದರೆ ಇಂಥದೇ ನಿಲುವು ತಾಳುವುದಕ್ಕೆ ಅವಕಾಶವಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಎರಡು ತಥ್ಯಗಳು ಈ ವಿಷಯದಲ್ಲಿ ರಾಜಕೀಯವಾಗುತ್ತಿರುವುದು ಕಾಂಗ್ರೆಸ್ ಕಡೆಯಿಂದಲೇ ಹೊರತು ಬಿಜೆಪಿಯಿಂದಲ್ಲ ಎಂಬುದನ್ನು ಸೂಚಿಸುವಂತಿವೆ.
1. ದೆಹಲಿ ಹೈಕೋರ್ಟಿನಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಆಮ್ಲಜನಕ ವ್ಯವಸ್ಥೆ ಹಾಗೂ ಜೀವರಕ್ಷಕ ಔಷಧಗಳು ಅಕ್ರಮವಾಗಿ ಸಂಗ್ರಹವಾಗಿಯೇ ಎಂಬುದನ್ನು ತನಿಖೆ ಮಾಡಬೇಕು ಎಂದು ಕೋರಿತ್ತು. ದೆಹಲಿ ಪೊಲೀಸರು ಈ ವಿಚಾರಣೆಯ ಭಾಗವಾಗಿ ಯೂಥ್ ಕಾಂಗ್ರೆಸ್ ಎಲ್ಲಿಂದ ಅಗತ್ಯ ಔಷಧಗಳನ್ನು ಕಲೆಹಾಕಿದೆ ಎಂದು ಮಾಹಿತಿ ಸಂಗ್ರಹಿಸಿದ್ದಾರಷ್ಟೆ.
2. ಇದೇ ವಿಚಾರಣೆಯ ಅಂಗವಾಗಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರನ್ನೂ ಪೊಲೀಸರು ಪ್ರಶ್ನಿಸಿದ್ದಾರೆ. ಏಕೆಂದರೆ ಗಂಭೀರ್ ಸಹ ಬೇಡಿಕೆ ಸಲ್ಲಿಸಿದ ಜನರಿಗೆ ಅಗತ್ಯ ಔಷಧಗಳನ್ನು ನೀಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಇದು ಒಟ್ಟಾರೆ ಮಾಹಿತಿಗಳ ಸಂಗ್ರಹಣೆಯೇ ಹೊರತು ಪೊಲೀಸ್ ಕಾರ್ಯಾಚರಣೆ ಏನಲ್ಲ. ಇಂಥ ಮಾಹಿತಿ ಕಲೆಹಾಕುವ ಕೆಲಸಕ್ಕೆ ಕಾರಣವಾಗಿದ್ದು ದೆಹಲಿ ಉಚ್ಚ ನ್ಯಾಯಾಲಯದ ನಿರ್ದೇಶನವೇ ಹೊರತು ಕೇಂದ್ರದ ಆದೇಶವಲ್ಲ.
“ದೆಹಲಿ ಪೊಲೀಸರಿಗೆ ಅಗತ್ಯವಿದ್ದ ಮಾಹಿತಿಗಳನ್ನು ನಾನು ನೀಡಿದ್ದೇನೆ. ಇದೊಂದು ನಿಯಮಬದ್ಧ ನಡೆಯೇ ಹೊರತು ಕಾಂಗ್ರೆಸ್ ಇದನ್ನು ರಾಜಕೀಯಗೊಳಿಸುವ ಯಾವ ಅಗತ್ಯವೂ ಇಲ್ಲ” ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.
Opposition should not indulge in needless politicisation of due process.
Delhi Police has asked for a reply from us & we’ve provided all details. I will keep serving Delhi & its people to the best of my abilities always!— Gautam Gambhir (@GautamGambhir) May 14, 2021