Tuesday, August 16, 2022

Latest Posts

ಕುಮಾರಸ್ವಾಮಿ ಹೇಳಿಕೆಯ ಫ್ಯಾಕ್ಟ್ ಚೆಕ್ : ಆಯುಷ್ಮಾನ್ ಭಾರತ ಯೋಜನೆಯಡಿ ಕೋವಿಡ್ ಚಿಕಿತ್ಸೆ ಅದಾಗಲೇ ಲಭ್ಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

“ಆಯುಷ್ಮಾನ್ ಭಾರತ ಫಲಾನುಭವಿಗಳಿಗೆ ಸರಾಗವಾಗಿ ಕೊರೋನಾ ಉಚಿತ ಚಿಕಿತ್ಸೆ ಕೊಡುವುದಿಲ್ಲವಾದರೆ ಈ ಯೋಜನೆ ಮತ್ತಿನ್ಯಾವ ಪುರುಷಾರ್ಥಕ್ಕೆ” ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಣಿ ಟ್ವೀಟುಗಳನ್ನೇ ಮಾಡಿ, ಕೇಂದ್ರ ಸರ್ಕಾರವನ್ನು ತಕ್ಷಣ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಓದಿದ ಯಾರಿಗಾದರೂ ಹೌದಲ್ಲ ಎನಿಸೀತು. ಆದರೆ ಈ ಬಗ್ಗೆ ವಾಸ್ತವದಲ್ಲಿ ಕುಮಾರಸ್ವಾಮಿ ಏಕೆ ಆಕ್ರೋಶಿತರಾಗಿದ್ದಾರೆ ಹಾಗೂ ನಿರ್ದಿಷ್ಟವಾಗಿ ಆಯುಷ್ಮಾನ್ ಭಾರತದ ಯಾವ ಆಯಾಮದ ಸುಧಾರಣೆ ಬಯಸಿದ್ದಾರೆ ಎಂಬುದು ಟ್ವೀಟಿನಲ್ಲಿ ಸ್ಪಷ್ಟವಿಲ್ಲ. ಏಕೆಂದರೆ, ಆಯುಷ್ಮಾನ್ ಭಾರತ ಯೋಜನೆಯ ಫಲಾನುಭವಿಗಳು ತಮ್ಮ ವಿಮೆಯ ಸೌಲಭ್ಯದಡಿ ಕೊವಿಡ್19ಕ್ಕೆ ಸಹ ಚಿಕಿತ್ಸೆ ಪಡೆಯಬಹುದಾದ ಅನುಕೂಲವನ್ನು ಕಳೆದ ವರ್ಷ ಏಪ್ರಿಲ್ ನಲ್ಲಿಯೇ ಭಾರತ ಸರ್ಕಾರ ಕಲ್ಪಿಸಿದೆ.

ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿ ಕೋವಿಡ್19ರ ಟೆಸ್ಟಿಂಗ್ ಮತ್ತು ಚಿಕಿತ್ಸೆ ಎರಡೂ ಉಚಿತ ಎಂಬ ಏಪ್ರಿಲ್ 4, 2020ರ ಆದೇಶವನ್ನು ನೀವು ಈ ಕೊಂಡಿಯಲ್ಲಿ ಓದಬಹುದು

ಆದಾಗ್ಯೂ ರು 5 ಲಕ್ಷಗಳ ಆಯುಷ್ಮಾನ್ ಭಾರತ ವಿಮೆಗೆ ಅರ್ಹವಾಗುವುದಕ್ಕೆ ಕೆಲವು ನಿಯಮಗಳಿವೆ. ವಿಮೆ ಪಡೆದುಕೊಳ್ಳುವುದಕ್ಕೆ ಕನಿಷ್ಠ ಒಂದು ದಿನದ ಆಸ್ಪತ್ರೆವಾಸ ಕಡ್ಡಾಯ. ಗ್ರಾಮೀಣ ಭಾಗದಲ್ಲಿ ಕಚ್ಚಾ ಮನೆ ಹೊಂದಿರುವವರು, ಎಸ್ಸ್ ಎಸ್ಟಿ ಸಮುದಾಯ, ಅಂಗವಿಕಲರು, ಭೂರಹಿತರು, ಕೂಲಿ ಕಾರ್ಮಿಕರು ಮುಂತಾದವರು ಫಲಾನುಭವಿಗಳಾಗುವುದಕ್ಕೆ ಅರ್ಹರಾಗಿದ್ದರೆ, ನಗರ ಪ್ರದೇಶಗಳಲ್ಲಿ ಬೀದಿಬದಿ ವ್ಯಾಪಾರಿಗಳು, ಸ್ವಚ್ಛತಾ ಕೆಲಸಗಾರರು, ನಿರ್ವಸತಿಗರು, ಕಾರ್ಮಿಕರು ಮುಂತಾದವರು ಅರ್ಹತೆ ಹೊಂದಿರುತ್ತಾರೆ.

ಹೀಗಾಗಿ, ನಾಗರಿಕರು ಸರಳವಾಗಿ ಈ ವಿಮೆ ಯೋಜನೆ ಅಡಿ ಚಿಕಿತ್ಸೆ ಪಡೆಯಬೇಕು ಎಂದು ಕುಮಾರಸ್ವಾಮಿಯವರು ಹೇಳಿರುವುದು ಈ ಯೋಜನೆಯನ್ನು ಈಗಿರುವ ಫಲಾನುಭವಿಗಳ ಆಚೆಗೆ ವಿಸ್ತರಿಸಬೇಕು ಎಂಬರ್ಥದಲ್ಲೋ ಅಥವಾ ಮನೆಯಲ್ಲೇ ಚಿಕಿತ್ಸೆ ಪಡೆವವರಿಗೂ ವಿಸ್ತರಿಸಬೇಕು ಎಂಬರ್ಥದಲ್ಲೋ ಸ್ಪಷ್ಟವಾಗಿಲ್ಲ.

ಉಳಿದಂತೆ, ಆಯುಷ್ಮಾನ್ ಭಾರತ ವಿಮೆ ಫಲಾನುಭವಿಗಳಿಗೆ, ಈ ಯೋಜನೆ ಅಡಿ ಬರುವ ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಕೋವಿಡ್19ಕ್ಕೆ ಉಚಿತ ಚಿಕಿತ್ಸೆ ಕಳೆದೊಂದು ವರ್ಷದಿಂದಲೇ ಜಾರಿಯಲ್ಲಿದೆ. 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss