ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ 5 ತಿಂಗಳ ಕಂದಮ್ಮನ ಪ್ರಾಣ ಉಳಿಸಲು ನೆರವಿನ ಮಹಾಪೂರವೇ ಹರಿದು ಬಂದಿದ್ದು, ಈ ಮೂಲಕ ಗುಜರಾತ್ ಮೂಲದ ದಂಪತಿಯು ಮಗುವಿನ ಚಿಕಿತ್ಸೆಗಾಗಿ ಜೀನ್ ಥೆರಪಿ ಇಂಜೆಕ್ಷನ್ ಖರೀದಿಸಲು, ‘ಕ್ರೌಡ್ ಫಂಡಿಂಗ್’ ಮೂಲಕ 16 ಕೋಟಿ ಸಂಗ್ರಹಿಸಿದ್ದಾರೆ.
ಗುಜರಾತ್ನ ಮಹಿಸಾಗರ್ ಜಿಲ್ಲೆಯ ಲುನಾವಾಡಾ ಪಟ್ಟಣದ ನಿವಾಸಿ ರಾಜ್ದೀಪ್ ಸಿನ್ಹಾ ರಾಥೋಡ್ ಮತ್ತು ಅವರ ಪತ್ನಿ ಜಿನಾಲ್ಬಾ ಅವರಿಗೆ ತಮ್ಮ ಮಗ ಧೈರ್ಯರಾಜ್ ಚಿಕಿತ್ಸೆಗೆ ಹಣದ ಅವಶ್ಯಕತೆ ಇತ್ತು. ಇದಕ್ಕಾಗಿ ಅವರು 42 ದಿನಗಳಲ್ಲಿ ₹16 ಕೋಟಿ ಸಂಗ್ರಹಿಸಿದ್ದಾರೆ. ಈ ಅಭಿಯಾನವನ್ನು ಅವರು ಮಾರ್ಚ್ ತಿಂಗಳಿನಲ್ಲಿ ಆರಂಭಿಸಿದ್ದರು.
ಇದೀಗ ನೆರವು ಸಿಕ್ಕ ಬೆನ್ನಲ್ಲೇ ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜೀನ್ ಥೆರಪಿ ಇಂಜೆಕ್ಷನ್ ನೀಡಲಾಗಿದೆ ಅಂತ ರಾಜ್ದೀಪ್ ರಾಥೋಡ್ ಹೇಳಿದ್ದಾರೆ.
42 ದಿನಗಳಲ್ಲಿ 16 ಕೋಟಿ ಸಂಗ್ರಹ
ಮಾರ್ಚ್ನಲ್ಲಿ ನಾನು ಹಾಗೂ ನನ್ನ ಹೆಂಡತಿ ಇಂಪ್ಯಾಕ್ಟ್ ಗುರು ಎಂಬ ಕ್ರೌಡ್ಫಂಡಿಂಗ್ ಪ್ಲಾಟ್ಫಾರ್ಮ್(ಆನ್ಲೈನ್ ತಾಣ)ದಲ್ಲಿ ದೇಣಿಗೆ ಸಂಗ್ರಹಕ್ಕೆ ಅಭಿಯಾನ ಶುರು ಮಾಡಿದ್ದೆವು. 42 ದಿನಗಳಲ್ಲಿ 16 ಕೋಟಿ ಸಂಗ್ರಹವಾಗಿದೆ. ಗುಜರಾತ್ ಹಾಗೂ ದೇಶದ ಇನ್ನಿತರೆ ಭಾಗಗಳಿಂದ ಮತ್ತು ವಿದೇಶಗಳಿಂದಲೂ ಅನೇಕ ಮಂದಿ ಹಣಸಹಾಯ ಮಾಡಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇವೆ ಎಂದು ರಾಥೋಡ್ ಹೇಳಿದ್ದಾರೆ.
ಮಗುವಿಗೆ ಹುಟ್ಟಿದ ನಂತರ ಅದರ ಕೈ ಮತ್ತು ಕಾಲುಗಳ ಚಲನೆ ಸಾಧ್ಯವಾಗುತ್ತಿರಲಿಲ್ಲ. ಒಂದು ತಿಂಗಳ ಬಳಿಕ ತಮ್ಮ ಮಗನ ಕಾಯಿಲೆ ಬಗ್ಗೆ ದಂಪತಿಗೆ ಗೊತ್ತಾಗಿತ್ತು. ಇದಕ್ಕೆ ಜೀನ್ ಥೆರಪಿ ಇಂಜೆಕ್ಷನ್ ಝೋಲಾಗೆನೆಸ್ಮಾ ಒಂದೇ ಮದ್ದು ಅಂತ ವೈದ್ಯರು ಹೇಳಿದ್ದರು.
ಇಂಜೆಕ್ಷನ್ ಮೇಲಿನ ಕಸ್ಟಮ್ಸ್ ತೆರಿಗೆ ಮನ್ನಾ ಮಾಡಿದ್ದ ಕೇಂದ್ರ ಸರ್ಕಾರ
ಸ್ವಿಸ್ ಫಾರ್ಮಾ ಸಂಸ್ಥೆ ನೊವಾರ್ಟಿಸ್ ತಯಾರಿಸಿರೋ ಈ ಜೀನ್ ಥೆರಪಿ ಇಂಜೆಕ್ಷನ್ನ ಬೆಲೆ ಭಾರತದಲ್ಲಿ 16 ಕೋಟಿ. ಇನ್ನು ಕಸ್ಟಮ್ಸ್ ಸುಂಕ ಸುಮಾರು 6.5 ಕೋಟಿ. ಕೇಂದ್ರ ಸರ್ಕಾರ ಈಗಾಗಲೇ ಮಾನವೀಯ ನೆಲೆ ಮೇಲೆ ಕಸ್ಟಮ್ಸ್ ಮನ್ನಾ ಮಾಡಿದೆ ಎಂದು ರಾಥೋಡ್ ಹೇಳಿದ್ದಾರೆ. ಇಂಜೆಕ್ಷನ್ ಕೆಲವು ದಿನಗಳ ಹಿಂದೆ ಅಮೆರಿಕಾದಿಂದ ಬಂದಿತ್ತು. ನಾವು ನಿನ್ನೆ ಮುಂಬೈ ತಲುಪಿ, ಮಗನನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದೆವು. ಇಂದು ಮಗುವಿಗೆ ಇಂಜೆಕ್ಷನ್ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ.