ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ದೆಹಲಿಯ ಮೂರು ಮಾಲ್‌ಗಳು ಮತ್ತು ಆಸ್ಪತ್ರೆಗೆ ಬಾಂಬ್ ಬೆದರಿಕೆ ಬಂದಿದೆ. ಇಮೇಲ್ ಮೂಲಕ ಈ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ದೆಹಲಿಯ 3 ಮಾಲ್‌ಗಳು(Mall) ಮತ್ತು ಒಂದು ಆಸ್ಪತ್ರೆ(Hospital)ಗೆ ಈ ಸಂದೇಶ ಬಂದಿದ್ದು, ಕೆಲವೇ ಗಂಟೆಗಳನ್ನು ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಕಿಡಿಗೇಡಿಗಳು ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ಚಾಣಕ್ಯ ಮಾಲ್ (ಚಾಣಕ್ಯಪುರಿ), ಸೆಲೆಕ್ಟ್ ಸಿಟಿವಾಕ್ (ಸಾಕೇತ್), ಆಂಬಿಯೆನ್ಸ್ ಮಾಲ್ (ವಸಂತ್ ಕುಂಜ್) ಮತ್ತು ಪ್ರೈಮಸ್ ಆಸ್ಪತ್ರೆ (ಚಾಣಕ್ಯಪುರಿ) ಮತ್ತು ಇತರ ಕೆಲವು ಸ್ಥಳಗಳಲ್ಲಿ ಬಾಂಬ್ ಬೆದರಿಕೆಯ ಕುರಿತು ಮಾಹಿತಿ ಪಡೆದಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಬಂದ ಸ್ಥಳಗಳಲ್ಲಿ ದೆಹಲಿ ಪೊಲೀಸರು ಮತ್ತು ಅಗ್ನಿಶಾಮಕ ದಳಗಳು ಶೋಧ ಕಾರ್ಯಾಚರಣೆ ನಡೆಸಿವೆ. ಶೋಧದ ವೇಳೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂಬುದು ತಿಳಿದುಬಂದಿದೆ.
ನಿನ್ನೆಯಷ್ಟೇ ಮುಂಬೈ, ನೋಯ್ಡಾ, ಗುರುಗ್ರಾಮ, ಚೆನ್ನೈ ಸೇರಿ ದೇಶದ ವಿವಿಧ ನಗರಗಳ ಮಾಲ್, ಆಸ್ಪತ್ರಗಳಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ನಗರದ ವೈಟ್‌ಫೀಲ್ಡ್‌ನ ಮಾಲ್ ಸೇರಿ ಹಲವು ಮಾಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಬಂದಿದ್ದು, ನೀವು ಯಾರೂ ಬದುಕಲು ಅರ್ಹರಲ್ಲ. ಕಟ್ಟಡದ ಒಳಗಿರುವ ಎಲ್ಲರ ಜೀವ ರಕ್ತದ ಮಡುವಿನಲ್ಲಿ ಅಂತ್ಯವಾಗುತ್ತೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಲ್ಲೇ ಮಾಲ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿರುವುದರಿಂದ ಆತಂಕ ಮೂಡಿಸಿತ್ತು. ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ಪರಿಶೀಲಿಸಿದಾಗ, ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುವುದು ತಿಳಿದುಬಂದಿದೆ. ಹೀಗಾಗಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.