ವಜ್ರಗಳ ಬೇಡಿಕೆ ಕುಸಿತ: ಭಾರತದಲ್ಲಿ 20ಸಾವಿರ ಉದ್ಯೋಗ ನಷ್ಟ, ಕೆಲಸಗಾರರ ಬದುಕು ಅತಂತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಜ್ರಗಳನ್ನು ಕತ್ತರಿಸುವ, ಹೊಳಪು ನೀಡುವ ಉದ್ಯಮದಲ್ಲಿ ಜಗತ್ತಿನಲ್ಲಿಯೇ ಭಾರತ ನಂಬರ್‌ 1. ಸ್ಥಾನದಲ್ಲಿದೆ. ಆದರೆ ಇತ್ತೀಚಿನ ಜಾಗತಿಕ ವಿದ್ಯಮಾನಗಳಿಂದ ಈ ಉದ್ದಿಮೆ ಭಾರೀ ನಷ್ಟಕ್ಕೆ ಸಿಲುಕಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗು ಚೀನಾದಲ್ಲಿ ವಜ್ರಗಳ ಬೇಡಿಕೆ ಗಣನೀಯವಾಗಿ ಕುಸಿದಿರುವುದರಿಂದ ಭಾರತದ ವಜ್ರಕ್ಕೆ ಹೊಳಪು ನೀಡುವ, ವಜ್ರವನ್ನು ಕತ್ತರಿಸುವ ಕೆಲಸಗಾರರಿಗೆ ಕೆಲಸವಿಲ್ಲದಂತಾಗಿದೆ.

ವರದಿಯೊಂದರ ಪ್ರಕಾರ ವಜ್ರೋದ್ದಿಮೆಗೆ ಹೆಸರಾಗಿರುವ ಗುಜರಾತಿನ ಸೂರತ್‌ ನಲ್ಲಿ ಕಳೆದ ಒಂದು ತಿಂಗಳಲ್ಲಿಯೇ 20 ಸಾವಿರಕ್ಕೂ ಅಧಿಕ ಕೆಲಸಗಾರರು ಹೊಳಪು ವಜ್ರಕ್ಕೆ ಬೇಡಿಕೆ ಕುಸಿದಿರುವುದರಿಂದ ಉದ್ಯೋಗ ಕಳೆದುಕೊಂಡಿದ್ದಾರೆ. ಪ್ರಪಂಚಕ್ಕೆ ಸರಬರಾಜಾಗುವ ಹೊಳಪು ವಜ್ರಗಳಲ್ಲಿ 80 ಶೇಕಡಾದಷ್ಟು ವಜ್ರಗಳು ಸೂರತ್‌ನಲ್ಲಿಯೇ ರೂಪುಗೊಳ್ಳುತ್ತವೆ. ಭಾರತದ ವಜ್ರ ವ್ಯಾಪಾರದ ಕೇಂದ್ರವೆಂದು ಸೂರತ್‌ ಕರೆಸಿಕೊಳ್ಳುತ್ತದೆ. ಸುಮಾರು 8ಲಕ್ಷಕ್ಕೂ ಅಧಿಕ ಜನರು ವಜ್ರೋದ್ದಿಮೆಯ ಮೂಲಕವೇ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಸೂರತ್‌ ನಲ್ಲಿಯೇ ವಜ್ರೋದ್ದಿಮೆ ನೆಲಕಚ್ಚಿದೆ. ಬೇಡಿಕೆ ಕುಸಿತದಿಂದ ಅದೆಷ್ಟೋ ವಜ್ರಕ್ಕೆ ಹೊಳಪು ನೀಡುವ ಕಂಪನಿಗಳಲ್ಲಿ ಕೆಲಸಗಳು ಖಾಲಿ ಇವೆ. ವರದಿಯೊಂದರ ಪ್ರಕಾರ ಬಹುತೇಕ ಕಂಪನಿಗಳಲ್ಲಿ 30 ಶೇಕಡಾದಷ್ಟು ಕೆಲಸ ಖಾಲಿ ಇದೆ.

ಕಳೆದ ವರ್ಷದ ಏಪ್ರಿಲ್-ನವೆಂಬರ್‌ ಅವಧಿಯಲ್ಲಿಯೇ ಹೊಳಪುವಜ್ರಗಳ ರಫ್ತು ಕುಸಿತ ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ 5.43ಶೇಕಡಾದಷ್ಟು ಕಡಿಮೆಯಾಗಿದೆ ಎಂದು ಅಂಕಿ ಅಂಶಗಳು ತೋರಿಸಿವೆ. ಹೀಗಾಗಿ ಸೂರತ್ತಿನ ವಜ್ರ ಕೆಲಸಗಾರರಿಗೆ ಆರ್ಥಿಕ ಅನಿಶ್ಚಿತತೆ ಕಾಡುತ್ತಿದೆ. ಯುರೋಪ್‌ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉಕ್ರೇನ್‌ – ರಷ್ಯಾ ಯುದ್ಧದ ಪರಿಣಾಮ ತಲೆದೂರಿರುವ ಆರ್ಥಿಕ ಬಿಕ್ಕಟ್ಟು, ಚೀನಾದಲ್ಲಿ ಕೋವಿಡ್‌ ಉಲ್ಬಣಗಳು ವಜ್ರಗಳ ಬೇಡಿಕೆಯನ್ನು ಕಡಿಮೆ ಮಾಡಿವೆ. ಹೀಗಾಗಿ ಒಂದೇ ತಿಂಗಳಲ್ಲಿ ಸಾವಿರಾರು ಜನರು ಉದ್ಯೋಗಕಳೆದುಕೊಂಡಿದ್ದರೆ, ಮುಂಬರುವ ದಿನಗಳು ಮತ್ತೂ ಕೆಟ್ಟದಾಗಿರಬಹುದೆಂಬ ಭಯದ ವಾತಾವರಣದಲ್ಲಿ ಅನೇಕ ಕೆಲಸಗಾರರಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!