ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ವಿಜಯಪುರ:
ನಗರದಲ್ಲಿ ಕಳೆದ ಒಂದೆರಡು ತಿಂಗಳಿಂದ ಕೋವಿಡ್ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ ಸುಮಾರು 50 ಜನರ ಚಿತಾಭಸ್ಮ ಪಡೆಯಲು ಮೃತರ ಸಂಬಂಧಿಗಳು ಮುಂದೆಬಾರದ ಕಾರಣ, ಚಿತಾಭಸ್ಮಗಳು ಸ್ಮಶಾನದಲ್ಲಿಯೇ ಉಳಿದಿವೆ.
ಇಲ್ಲಿನ ಸೊಲ್ಲಾಪುರ ರಸ್ತೆಯಲ್ಲಿರುವ ದೇವಗಿರಿ ರುದ್ರಭೂಮಿಯಲ್ಲಿ, ಮೃತಪಟ್ಟವರ ಅಂತ್ಯಸಂಸ್ಕಾರ ನಡೆದಿದ್ದು, ಅಸ್ಥಿ ವಿಸರ್ಜನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.
ಜಿಲ್ಲೆಯಲ್ಲಿ ಕೋವಿಡ್ ತೀವ್ರತೆಯ ಸಂದರ್ಭ ಪ್ರತಿ ದಿನ 10, 15 ಜನರ ಅಂತ್ಯಕ್ರಿಯೆ ನಡೆದಿದ್ದು, ಸ್ಮಶಾನದಲ್ಲಿ ಚಿತೆಯ ಕಿಚ್ಚು ಆರದಂತಾಗಿತ್ತು. ಇಂತಹ ಸಂದರ್ಭ ಚಿತಾಭಸ್ಮ ಪಡೆಯಲು, ಮೃತರ ಕುಟುಂಬಸ್ಥರು ಬಾರದ ಹಿನ್ನೆಲೆ, ಅಂತ್ಯಕ್ರಿಯೆ ವಿಧಿ- ವಿಧಾನ ಕಾರ್ಯ ಅಪೂರ್ಣಗೊಂಡಿದೆ.
ಇನ್ನು ನಗರದ ಸ್ಮಶಾನವೊಂದರಲ್ಲಿ ಇರುವ ಸುಮಾರು 50 ಜನರ ಚಿತಾಭಸ್ಮ ಅಸ್ಥಿ ವಿಸರ್ಜನೆ ಮಾಡುವವರು ಯಾರು? ಎನ್ನುವ ಪ್ರಶ್ನೆ ಮೂಡುತ್ತಿದ್ದು, ಮೊನ್ನೆ ಬೆಂಗಳೂರಿನಲ್ಲೂ ಇದೇ ಸಮಸ್ಯೆ ತಲೆದೂರಿದಾಗ, ಕಂದಾಯ ಸಚಿವ ಆರ್. ಅಶೋಕ ಅವರು ಸಾಮೂಹಿಕ ಅಸ್ಥಿ ವಿಸರ್ಜನೆ ಕಾರ್ಯ ಕೈಗೊಂಡು, ವಿಧ- ವಿಧಾನ ಕ್ರಿಯೆ ಪೂರ್ಣಗೊಳಿಸಿದರು. ಸದ್ಯೆ ಇದೇ ರೀತಿ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಈ ಅನಾಥಗೊಂಡ ಚಿತಾಭಸ್ಮದ ಅಸ್ಥಿ ವಿಸರ್ಜನೆ ಕಾರ್ಯಕ್ಕೆ ಮುಂದಾಗುತ್ತದೆಯೆ ಎನ್ನುವುದು ಕಾದು ನೋಡಬೇಕು.