Wednesday, August 10, 2022

Latest Posts

ಮಕ್ಕಳನ್ನು ಉತ್ತಮವಾಗಿ ಬೆಳೆಸಲು-ಜನಸಂಖ್ಯೆ ಕಡಿಮೆ ಮಾಡಲು ಕುಟುಂಬ ಯೋಜನೆ ಸಹಕಾರಿ: ಕೇರಳ ಆರೋಗ್ಯ ಸಚಿವೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ವರದಿ, ಕಾಸರಗೋಡು:

ಕೊರೋನಾ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷದ ವಿಶ್ವ ಜನಸಂಖ್ಯಾ ದಿನವು ವಿಶೇಷ ಮಹತ್ವ ಪಡೆದಿದೆ ಎಂದು ಕೇರಳ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ಹೇಳಿದ್ದಾರೆ. ಈ ದಿನದ ಮುಖ್ಯ ಗುರಿ ವಿಶ್ವದ ಜನಸಂಖ್ಯೆಯ ಸಮಸ್ಯೆಗಳ ಮಹತ್ವವನ್ನು ಕೇಂದ್ರೀಕರಿಸುವುದು ಎಂದು ಅವರು ತಿರುವನಂತಪುರದಲ್ಲಿ ಅಭಿಪ್ರಾಯಪಟ್ಟರು.
ಜಾಗತಿಕವಾಗಿ ಕೊರೋನಾದಿಂದಾಗಿ ಕುಟುಂಬ ಯೋಜನೆ ಸೇವೆಗಳು ಅಸ್ತವ್ಯಸ್ತಗೊಂಡಿವೆ. ಯುಎನ್‍ಎಫ್‍ಪಿಎ ಅಧ್ಯಯನದ ಪ್ರಕಾರ ವಿಶ್ವದಾದ್ಯಂತ 12 ಮಿಲಿಯನ್ ಮಹಿಳೆಯರು ಕುಟುಂಬ ಯೋಜನೆ ಅಡ್ಡಿಗಳಿಂದ ಬಳಲುತ್ತಿದ್ದಾರೆ. ಇದು ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದರವರು.
ಈ ವರ್ಷದ ವಿಶ್ವ ಜನಸಂಖ್ಯಾ ದಿನದ ಸಂದೇಶವೆಂದರೆ ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬವನ್ನು ನಿರ್ಮಿಸಲು ಕುಟುಂಬ ಕಲ್ಯಾಣ ಸೇವೆಗಳು ಬಿಕ್ಕಟ್ಟಿನಲ್ಲಿ ಲಭ್ಯವಾಗಬೇಕು ಎಂದಾಗಿದೆ. ಈ ವರ್ಷದ ಜನಸಂಖ್ಯಾ ನಿಯಂತ್ರಣ ಚಟುವಟಿಕೆಗಳು ಈ ವಿಷಯವನ್ನು ಆಧರಿಸಿವೆ.1987ನೇ ಜುಲೈ 11ರಂದು ವಿಶ್ವದ ಜನಸಂಖ್ಯೆಯು 500 ಬಿಲಿಯನ್ ಆಗಿತ್ತು. ಮುಂದಿನ 50 ವರ್ಷಗಳಲ್ಲಿ ವಿಶ್ವದ ಜನಸಂಖ್ಯೆಯು ದ್ವಿಗುಣಗೊಳ್ಳಲಿದೆ ಎಂದು ಜನಸಂಖ್ಯಾ ಶಾಸ್ತ್ರಜ್ಞರು ಲೆಕ್ಕ ಹಾಕಿರುವುದನ್ನು ಸಚಿವೆ ವೀಣಾ ಜೋರ್ಜ್ ಮೆಲುಕು ಹಾಕಿದರು.
ಒಂದು ಕುಟುಂಬ ಮತ್ತು ಸಮುದಾಯದ ಅಭಿವೃದ್ಧಿಯೇ ಉತ್ತಮ ಕುಟುಂಬ ಯೋಜನೆ. ಇದು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಕುಟುಂಬ ಯೋಜನೆಯು ಮಕ್ಕಳನ್ನು ಚೆನ್ನಾಗಿ ಬೆಳೆಸಲು ಮತ್ತು ಜನಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಮಕ್ಕಳ ಜನನಗಳ ನಡುವೆ ಕನಿಷ್ಠ ಮೂರು ವರ್ಷಗಳ ಅಂತರ ಇರಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ ಎಂಬುದನ್ನು ಅವರು ಉಲ್ಲೇಖಿಸಿದರು.
1952ರಲ್ಲಿ ಭಾರತವು ಕುಟುಂಬ ಯೋಜನೆಗಾಗಿ ಮೊದಲ ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಕೇರಳದಲ್ಲಿ ಕುಟುಂಬ ಯೋಜನಾ ವಿಧಾನಗಳು ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಕೇಂದ್ರಗಳ ಮೂಲಕ ಉಚಿತವಾಗಿ ಲಭಿಸುತ್ತಿವೆ. ಸಾರ್ವಜನಿಕ ಆರೋಗ್ಯ ಎಂಬ ಗುರಿಯೊಂದಿಗೆ ದಾದಿಯರು ಇಂತಹ ಸೇವೆಗಳನ್ನು ಅತ್ಯುತ್ತಮ ರೀತಿಯಲ್ಲಿ ಒದಗಿಸುತ್ತಿದ್ದಾರೆ. ಇದಲ್ಲದೆ ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಮಹಿಳೆಯರನ್ನು ಜಾಗೃತಗೊಳಿಸಲಾಗುತ್ತಿದೆ ಎಂದರು.
ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟಲು ಅನೇಕ ತಾತ್ಕಾಲಿಕ ಮತ್ತು ಶಾಶ್ವತ ಮಾರ್ಗಗಳಿವೆ. ಭವಿಷ್ಯದಲ್ಲಿ ಮಕ್ಕಳನ್ನು ಪಡೆಯದಿರಲು ನಿರ್ಧರಿಸುವವರು ಶಾಶ್ವತ ಗರ್ಭನಿರೋಧಕವನ್ನು ಬಳಸಬಹುದು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಕುಟುಂಬ ಯೋಜನೆ ವಿಧಾನಗಳು ದೊರಕುತ್ತಿವೆ. ಕೇರಳದ ಎಲ್ಲ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಗರ್ಭಧಾರಣೆ ತಡೆಯಲು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss