Monday, August 8, 2022

Latest Posts

ಪ್ರಸಿದ್ಧ ಮಲೆಯಾಳ ಸಿನೆಮಾ ನಟ ವಿವೇಕ್ ಗೋಪಾಲ್ ಬಿಜೆಪಿಗೆ ಸೇರ್ಪಡೆ

ಹೊಸ ದಿಗಂತ ವರದಿ, ಕಾಸರಗೋಡು:

ಪ್ರಸಿದ್ಧ ಮಲೆಯಾಳ ಸಿನೆಮಾ, ಸೀರಿಯಲ್ ನಟ ವಿವೇಕ್ ಗೋಪಾಲ್ ಬಿಜೆಪಿಗೆ ಸೇರ್ಪಡೆಗೊಂಡರು. ತೃಶೂರು ಜಿಲ್ಲೆಯ ಪುದುಕ್ಕಾಡ್ ವಿಧಾನಸಭಾ ಕ್ಷೇತ್ರದ ಆಂಬಲ್ಲೂರಿನಲ್ಲಿ ನಡೆದ ಬಿಜೆಪಿ ವಿಜಯ ಯಾತ್ರೆಗೆ ನೀಡಿದ ಸ್ವಾಗತ ಸಮಾರಂಭದಲ್ಲಿ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರು ವಿವೇಕ್ ಗೋಪಾಲ್ ಅವರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ಈ ಹಿಂದೆಯೇ ವಿವೇಕ್ ಗೋಪಾಲ್ ತಿಳಿಸಿದ್ದರು.
ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗ ಮತ್ತು ಐಕ್ಯರಂಗ ಒಕ್ಕೂಟಗಳು ರಹಸ್ಯ ಒಪ್ಪಂದ ಮಾಡಿಕೊಂಡಿರುವುದಾಗಿ ಕೆ.ಸುರೇಂದ್ರನ್ ಇದೇ ಸಂದರ್ಭದಲ್ಲಿ ಆರೋಪಿಸಿದರು. ರಮೇಶ್ ಚೆನ್ನಿತ್ತಲ ಸಹಿತ ಕಾಂಗ್ರೆಸ್ ಪಕ್ಷದ ರಾಜ್ಯ ನೇತಾರರು ನಡೆಸಿದ ರಹಸ್ಯ ಒಪ್ಪಂದದ ಫಲವಾಗಿ ಈ ಹೊಂದಾಣಿಕೆ ನಡೆದಿದೆ ಎಂದು ಅವರು ತಿಳಿಸಿದರು. ಆದ್ದರಿಂದ ನೇಮಂ ಮಂಡಲದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಈಗಾಗಲೇ ಪ್ರಬಲ ಪ್ರಚಾರ ಆರಂಭಿಸಿದೆ ಎಂದು ಕೆ.ಸುರೇಂದ್ರನ್ ತಿಳಿಸಿದರು. ನೇಮಂ ಮಂಡಲದಲ್ಲಿ ಸತ್ಯ ಮತ್ತು ಸುಳ್ಳಿನ ನಡುವೆ ಹಾಗೂ ನೈತಿಕ ಮೈತ್ರಿಕೂಟ ಮತ್ತು ಅನೈತಿಕ ಮೈತ್ರಿಕೂಟದ ನಡುವೆ ಸ್ಪರ್ಧೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ವಿಮರ್ಶಿಸಿದರು.
ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲೂ ಎನ್‌ಡಿಎಯ ಅಭ್ಯರ್ಥಿಗಳನ್ನು ಕೆಲವು ದಿನಗಳಲ್ಲಿ ಅಂತಿಮಗೊಳಿಸಿ ಘೋಷಿಸಲಾಗುವುದು. ಜನಹಿತವಾದ ಅಭ್ಯರ್ಥಿಗಳನ್ನು ಎಲ್ಲಾ ಮಂಡಲಗಳಲ್ಲಿಯೂ ಸ್ಪರ್ಧಾ ಕಣಕ್ಕಿಳಿಸಲಾಗುವುದು. ಮುಸ್ಲಿಂಲೀಗ್‌ನ ಕೋಮುವಾದವನ್ನು ತಿರಸ್ಕರಿಸಿ ನರೇಂದ್ರ ಮೋದಿಯವರ ಅಭಿವೃದ್ಧಿ ನೀತಿಯನ್ನು ಅಂಗೀಕರಿಸಿ ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಬಂದರೆ ಮುಸ್ಲಿಮರನ್ನು ಬಿಜೆಪಿ ಸ್ವಾಗತಿಸುವುದಾಗಿ ಕೆ.ಸುರೇಂದ್ರನ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss