ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………….
ಹೊಸದಿಗಂತ ವರದಿ, ಉಪ್ಪಿನಂಗಡಿ:
ರಸ್ತೆಯಲ್ಲಿ ನಡೆದ ಘಟನಾವಳಿಗೆ ಸಂಬಂಧಿಸಿದಂತೆ ಮತಾಂಧ ಗುಂಪೊಂದು ಮನೆಯೊಂದಕ್ಕೆ ನುಗ್ಗಿ ಸೈನಿಕ ಹಾಗೂ ಸೈನಿಕನ ಪತ್ನಿ ಮೇಲೆ ಹಲ್ಲೆ ನಡೆಸಿದ ಘಟನೆ ನೆಲ್ಯಾಡಿ ಪರಿಸರದಲ್ಲಿ ಸಂಭವಿಸಿದ್ದು, ನಾಗರಿಕ ವಲಯದಲ್ಲಿ ದಿಗ್ಭ್ರಮೆ ವ್ಯಕ್ತವಾಗಿದೆ.
ಭಾರತೀಯ ಸೇನಾ ಯೋಧರಾಗಿ ರುವ ನಾಗೇಶ್ ಕಟ್ಟೆಮಜಲು ಎಂಬವರು ತನ್ನ ಪತ್ನಿಯೊಡಗೂಡಿ ಮಂಗಳವಾರದಂದು ಅವಶ್ಯಕ ವಸ್ತುಗಳ ಖರೀದಿಗೆ ನೆಲ್ಯಾಡಿ ಪೇಟೆಗೆ ಹೋಗುವ ಸಂಧರ್ಭದಲ್ಲಿ ಅವರ ಕಾರಿಗೆ ದ್ವಿಚಕ್ರ ವಾಹನವೊಂದು ಡಿಕ್ಕಿಯಾಗಿತ್ತು. ಈ ಸಂದರ್ಭ ಸವಾರ ಡಿಕ್ಕಿ ಹೊಡೆದ ಕಾರಣಕ್ಕೆ ಮಾತಿನ ಚಕಮಕಿಯುಂಟಾಗಿ ಹೊಕೈ ನಡೆದಿತ್ತು ಎನ್ನಲಾಗಿದೆ.
ಈ ಘಟನಾವಳಿಯನ್ನು ಮತೀಯವಾಗಿ ಬಳಸಿಕೊಂಡ ಮತಾಂಧ ವ್ಯಕ್ತಿಗಳು ಕೊಕ್ಕಡ ಗ್ರಾಮ ವ್ಯಾಪ್ತಿಯ ಪುತ್ಯ ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ನಾಗೇಶ್ ಮತ್ತು ಅವರ ಪತ್ನಿ ವಿಶಾಲಾಕ್ಷಿ ಎಂಬವರ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದು, ಹಲ್ಲೆಗೀಡಾದ ದಂಪತಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ದ್ವಿಚಕ್ರ ವಾಹನ ಸವಾರ ಶರೀಫ್ ಕೂಡಾ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಏನು ನಡೆದಿಲ್ಲ ಅಂತಾರೆ ಪೊಲೀಸರು!
ಪ್ರಕರಣದ ಬಗ್ಗೆ ಸ್ಪಷ್ಠನೆ ಬಯಸಿ ಉಪ್ಪಿನಂಗಡಿ ಠಾಣಾಧಿಕಾರಿಯವರನ್ನು ಸಂಪರ್ಕಿಸಿದಾಗ , ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವಿನ ವಿಚಾರದಲ್ಲಿ ವ್ಯಕ್ತಿಗತ ಸಂಘರ್ಷ ನಡೆದಿದೆ ಎಂದೂ, ಮನೆಗೆ ನುಗ್ಗಿ ದಾಳಿ ನಡೆದಿಲ್ಲ ಎಂದೂ ತಿಳಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಡಿಯೋ ದೃಶ್ಯಾವಳಿಗಳು ಮನೆಯಂಗಳಕ್ಕೆ ಗುಂಪೊಂದು ದಾಳಿ ನಡೆಸುತ್ತಿರುವುದನ್ನು ಸ್ಪಷ್ಠವಾಗಿ ತಿಳಿಯಪಡಿಸುತ್ತಿದೆ. ಮಾತ್ರವಲ್ಲದೆ ಹಲ್ಲೆಕೋರರ ಮುಖಚರ್ಯೆಯೂ ಕಾಣಿಸುತ್ತಿದೆ. ಇಷ್ಟೆಲ್ಲಾ ಘಟನಾವಳಿಗಳು ನಡೆದರೂ ನಡೆದಿಲ್ಲ ಎನ್ನುವ ಪೊಲೀಸ್ ಅಧಿಕಾರಿಗಳ ನಡೆ ಗೊಂದಲ ಮೂಡಿಸಿದೆ.