35 ವರ್ಷ ಸೇವೆಯಲ್ಲಿದ್ದ ʼಐಎನ್‌ಎಸ್‌ ಸಿಂಧುಧ್ವಜ್‌ʼ ಗೆ ಗೌರವದ ವಿದಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತೀಯ ನೌಕಾ ಸೇನೆಯಲ್ಲಿ 35 ವರ್ಷಗಳ ಕಾಲ ನಿರಂತರ ಸೇವೆಯಲ್ಲಿದ್ದು ನೌಕಾಸೇನೆಯ ಹಲವಾರು ಸಾಧನೆಗಳಿಗೆ ಸಹಾಯಕವಾದ ಜಲಾಂತರ್ಗಾಮಿ ʼಐಎನ್‌ಎಸ್‌ ಸಿಂಧುಧ್ವಜ್‌ʼ ನೌಕಾಸೇನೆಗೆ ವಿದಾಯ ಹೇಳಿದೆ.

ಹೆಸರೇ ಹೇಳುವಂತೆ ಇದು ಸಮುದ್ರದಲ್ಲಿ ಧ್ವಜಧಾರಕನಂತೆ ಕಾರ್ಯನಿರ್ವಹಿಸಿತ್ತು. ತನ್ನ 35 ವರ್ಷಗಳ ಪ್ರಯಾಣದುದ್ದಕ್ಕೂ ಸೇನೆಯ ಆತ್ಮನಿರ್ಭರ ಸಾಧಿಸುವ ಪ್ರಯತ್ನಗಳ ಧ್ವಜಧಾರಿಯಾಗಿತ್ತು. ಇದು ರಷ್ಯಾನಿರ್ಮಿತ ಸಿಂಧುಘೋಷ್ ವರ್ಗದ ಜಲಾಂತರ್ಗಾಮಿ ನೌಕೆಯಾಗಿದ್ದು ಅದನ್ನು ದೇಶೀಕರಣಗೊಳಿಸಲಾಗಿತ್ತು. ಈ ನೌಕೆಯು ಹಲವು ಮೊದಲುಗಳಿಗೆ ಎಡೆ ಮಾಡಿಕೊಟ್ಟಿದೆ. ಸ್ಥಳೀಯ ಸೋನಾರ್ USHUS ಬಳಕೆ, ರುಕ್ಮಣಿಯಂತಹ ಸ್ಥಳೀಯ ಉಪಗ್ರಹ ಸಂವಹನ ವ್ಯವಸ್ಥೆಗಳು, ಸ್ಥಳೀಯ ಟಾರ್ಪಿಡೊ ಫೈರ್ ಕಂಟ್ರೋಲ್ ಸಿಸ್ಟಮ್‌ನ ಕಾರ್ಯಾಚರಣೆ ಮುಂತಾದವು ʼಸಿಂಧುಧ್ವಜ್‌ʼ ನಲ್ಲೇ ಮೊದಲು ಬಳಕೆಯಾಗಿದ್ದವು.

ಆಳಸಮುದ್ರದಲ್ಲಿ ಮುಳುಗಿ ಸಿಬ್ಬಂದಿ ವರ್ಗಾವಣೆಯನ್ನುಕೂಡ ಯಶಸ್ವಿಯಾಗಿ ಪೂರೈಸಿದ ಇದು ನೀರಿನಲ್ಲಿ ಬೂದು ಬಣ್ಣದ ನರ್ಸ್ ಶಾರ್ಕ್ ಅನ್ನು ಹೋಲುವಂತೆ ಕಾಣಿಸುತ್ತದೆ. ಹೊಸ ಅನ್ವೇಷಣೆಯ ಹೆಸರಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಸಿಎನ್ಎಸ್ ರೋಲಿಂಗ್ ಟ್ರೋಫಿಯನ್ನು ಪಡೆದ ಏಕೈಕ ಜಲಾಂತರ್ಗಾಮಿ ನೌಕೆ ಇದಾಗಿದೆ.

ಹೀಗೆ ನೌಕಾಸೇನೆಗೆ ವಿಶಿಷ್ಟ ಕೊಡುಗೆ ನೀಡಿದ ʼಐಎನ್‌ಎಸ್‌ ಸಿಂಧುಧ್ವಜ್‌ʼ ಗೆ ವಿಶಾಖಪಟ್ಟಣದಲ್ಲಿ ಗೌರವದ ವಿದಾಯ ಹೇಳಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪೂರ್ವ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್‌ಗುಪ್ತಾ ಭಾಗವಹಿಸಿದ್ದರು. ಕಮೊಡೊರ್ ಎಸ್ಪಿ ಸಿಂಗ್ (ನಿವೃತ್ತ), ಕಮಿಷನಿಂಗ್ ಸಿಒ ಮತ್ತು 26 ಕಮಿಷನಿಂಗ್ ಸಿಬ್ಬಂದಿ ಪರಿಣತರು ಸೇರಿದಂತೆ 15 ಮಾಜಿ ಕಮಾಂಡಿಂಗ್ ಅಧಿಕಾರಿಗಳು ಭಾಗವಹಿಸಿದ್ದರು.

ಡಿಕಮಿಷನಿಂಗ್ ಪೆನ್ನಂಟ್ ಅನ್ನು ಕೆಳಗಿಳಿಸುವಾಗ ಮೋಡಕವಿದ ಆಕಾಶವು ಗಾಂಭೀರ್ಯತೆಯನ್ನು ಹೆಚ್ಚಿಸಿದ್ದಲ್ಲದೇ ಸಿಂಧುಧ್ವಜ್‌ ನ 35 ವರ್ಷಗಳ ವೈಭವದ ಗಸ್ತಿಗೆ ಸಾಕ್ಷಿಯಾದಂತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!