ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:
ವಿಶ್ವ ವಿಖ್ಯಾತ ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಿಸಲು ಸರ್ಕಾರ ಮುಂದಾಗಿದ್ದು, ರೋಪ್ ವೇ ಜೊತೆಗೆ ವಾಹನಗಳ ನಿಲುಗಡೆಗಾಗಿ ರೈತರ ಕೃಷಿ ಜಮೀನು ಸ್ವಾಧೀನ ಮಾಡುತ್ತಿರುವುದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಲವತ್ತಾದ ಕೃಷಿ ಜಮೀನಿಗೆ ಪ್ರಾಣ ಕೊಟ್ಟಾದರು ಸರಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತೇವೆ ಎಂದು ಭೂಮಿ ಕಳೆದುಕೊಳ್ಳುತ್ತಿರುವ ಕೆಲ ರೈತರು ಎಚ್ಚರಿಕೆ ನೀಡಿದ್ದಾರೆ.
ನಂದಿ ಬೆಟ್ಟಕ್ಕೆ ರೋಪ್ ವೇ ಕಲ್ಪಿಸಬೇಕೆಂಬುದು ಬಹುದಿನಗಳ ಕನಸು. ಈ ಕನಸು ನನಸು ಮಾಡಲು ಸರ್ಕಾರ ಮುಂದಾಗಿದ್ದು, ಇಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೊಗೇಶ್ವರ್ ನಂದಿಗಿರಿಧಾಮಕ್ಕೆ ಭೇಟಿ ನೀಡಿದ್ದಾರೆ. ನಂದಿಗಿರಿಧಾಮಕ್ಕೆ ಭೇಟಿ ನೀಡಿರುವ ಸಚಿವ ಯೊಗೇಶ್ವರ್ ರೋಪ್ ವೇ ನಿರ್ಮಾಣವಾಗುವ ಸ್ಥಳವನ್ನು ವಿಕ್ಷಣೆ ಮಾಡಲಿದ್ದು, ರೋಪ್ ವೇ ನಿರ್ಮಾಣವಾಗುವ ಸ್ಥಳದಲ್ಲೇ ಪ್ರವಾಸಿಗರ ವಾಹನಗಳ ನಿಲುಗಡೆಗೆ ಜಮೀನು ಸಹ ಮೀಸಲಿಡಲಾಗಿದೆ.
ಪಾರ್ಕಿಂಗ್ ನಿರ್ಮಾಣಕ್ಕೆ ಒಟ್ಟು 11 ಎಕರೆ ರೈತರ ಜಮೀನು ಸ್ವಾಧೀನ ಮಾಡಲು ಉದ್ದೇಶಿಸಲಾಗಿದೆ. ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 71ರ ಅನ್ವಯ ಪಾರ್ಕಿಂಗ್ ಕಾಮಗಾರಿಗೆ ಸ್ಥಳವನ್ನು ಕಾಯ್ದಿರಿಸುವಂತೆ ಆದೇಶಿಸಲಾಗಿದೆ. ಆದರೆ ಈ ಜಾಗ ಚಿಕ್ಕಬಳ್ಳಾಪುರ ಮತ್ತ ದೊಡ್ಡಬಳ್ಳಾಪುರ ಗಡಿಭಾಗದಲ್ಲಿ ಬರಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಡುಕುಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ಗಳಲ್ಲಿ 8 ಎಕರೆ, ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮದ ಸರ್ವೆ ನಂಬರ್ನಲ್ಲಿ 3.20 ಎಕರೆ ಭೂಮಿ ಕಾಯ್ದಿರಿಸಲಾಗಿದೆ.
ಮಡುಕುಹೊಸಹಳ್ಳಿ ಗ್ರಾಮದ ಸರ್ವೇ ನಂಬರ್ಗಳಲ್ಲಿಯೇ ಇರುವ ಸರ್ಕಾರಿ ಗೋಮಾಳ ಜಮೀನನ್ನು ಪಾರ್ಕಿಂಗ್ ಸ್ಥಳಕ್ಕೆ ಬಳಸಿಕೊಳ್ಳಬೇಕು ಎನ್ನುವುದು ರೈತರ ಆಗ್ರಹವಾಗಿದೆ. 25 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಜಮೀನು ಏಕಾಏಕಿ ಸ್ವಾಧೀನ ಮಾಡಿಕೊಳ್ಳಲು ನಮ್ಮ ವಿರೋಧವಿದೆ. ನಂದಿಬೆಟ್ಟದ ತಪ್ಪಲಿನ ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ಸರ್ವೆ ನಂಬರ್ 94 ರಲ್ಲಿ ರೈತರು 25 ವರ್ಷಗಳಿಂದ ಸಾಗುವಳಿ ಮಾಡಿಕೊಂಡುಬರುತ್ತಿದ್ದಾರೆ. ಸರ್ಕಾರ ರೈತರಿಗೆ ಬಗರ್ ಹುಕುಂ ಸಾಗುವಳಿ ಚೀಟಿಯನ್ನು ನೀಡಿದೆ. ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಅರ್ಜಿಯನ್ನ ಸಲ್ಲಿಸಿದ್ದು ಕಂದಾಯ ಅಧಿಕಾರಿಗಳು ಸ್ಥಳ ತನಿಖೆ ವರದಿ, ನಕ್ಷೆ ಸಹ ಮಾಡಿದ್ದಾರೆ. ಈಗ ಏಕಾಏಕಿ ಬಡವರ ಜಮೀನು ಸ್ವಾಧೀನಕ್ಕೆ ಆದೇಶಿಸಿರುವುದು ಖಂಡನೀಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.