ಹೊಸ ದಿಗಂತ ವರದಿ ಬಳ್ಳಾರಿ:
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ರೈತ ವಿರೋಧಿ ಮೂರು ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಸವಕಲ್ಯಾಣದಿಂದ ಬಳ್ಳಾರಿ ವರೆಗೆ ಮಾ.5 ರಿಂದ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕರೂರು ಮಾಧವ ರೆಡ್ಡಿ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಮಾ.23 ರಂದು ಬಳ್ಳಾರಿ ನಗರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಜಿಲ್ಲೆಯಿಂದ 250 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದೇವೆ. 380 ಕಿ.ಮೀ.ಪಾದಯಾತ್ರೆ ಇದಾಗಿದ್ದು, ಬೀದರ್, ಕಲಬುರ್ಗಿ ಸೇರಿದಂತೆ ನೂರಾರು ರೈತರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಬಸವಕಲ್ಯಾಣ ದಿಂದ ಬಳ್ಳಾರಿ ವರೆಗೆ 22 ದಿನಗಳವರೆಗೆ ನಡೆಯಲಿರುವ ಪಾದಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ.
ಕಾಯ್ದೆಗಳು ಹಿಂಪಡೆಯುವವರೆಗೆ ಹೋರಾಟ ನಿಲ್ಲೋಲ್ಲ, ಬಸವಕಲ್ಯಾಣದಿಂದ, ಹುಮ್ನಾಬಾದ್, ಕಲಬುರ್ಗಿ, ಯಾದಗಿರಿ, ಸುರಪುರ, ಸಹಪುರ, ದೇವದುರ್ಗ, ರಾಯಚೂರು, ಮಾನವಿ, ಸಿಂದನೂರು, ಸಿರುಗುಪ್ಪ ಮೂಲಕ ಬಳ್ಳಾರಿ ತಲುಪಲಿದೆ ಎಂದರು. ಭಾರತ ಕೃಷಿ ಪ್ರಧಾನವಾದ ರಾಷ್ಟ್ರವಾಗಿದೆ. ಇಂತಹ ನಮ್ಮ ದೇಶದ ಬೆನ್ನೆಲಬು ರೈತ ಸಮೂಹ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಕೂಡಲೇ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರಿಗೆ ಮಾರಕವಾಗಿರುವ ಇಂತಹ ಕಾನೂನುಗಳನ್ನು ಜಾರಿಗೊಳಿಸಿದ ಕೇಂದ್ರದ ವಿರುದ್ಧ ದೇಹಲಿಯಲ್ಲಿ ಲಕ್ಷಾಂತರ ರೈತರು ಅಮರಣಾಂತ ಉಪವಾಸ, ಬೀದಿಗಿಳಿದು ಧರಣಿ ನಡೆಸುತ್ತಿದ್ದರೂ ಕೇಂದ್ರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತ ಜನಗಣ ಹೋರಾಟ ಸಮೀತಿ ಅಧ್ಯಕ್ಷ ಗಂಗಿರೆಡ್ಡಿ ಮಾತನಾಡಿ, ಈ ಪಾದಯಾತ್ರೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ಸಿಂಧಿಗೇರಿ ಗೋವಿಂದಪ್ಪ, ಲೇಪಾಕ್ಷಿ ಅಸುಂಡಿ, ರೈತ ಮಹಿಳೆ ಲಕ್ಷ್ಮಮ್ಮ ಚಾಗನೂರು, ಮಂಜುನಾಥ್ ಆಚಾರಿ, ತಿಮ್ಮನಗೌಡ, ಹುಲಗಯ್ಯ, ಶೇಖಣ್ಣ ಸೇರಿದಂತೆ ವಿವಿದ ರೈತರು ಉಪಸ್ಥಿತರಿದ್ದರು.