Wednesday, August 10, 2022

Latest Posts

ಕೊರೋನಾ ಟೆಸ್ಟ್‌ಗೆ ವೇಗ, ರಿಸಲ್ಟ್‌ ತಡವಾದರೆ ಲ್ಯಾಬ್‌ಗೆ ದಂಡ: ಡಾ.ಸಿ.ಎನ್.‌ ಅಶ್ವತ್ಥನಾರಾಯಣ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸುಪ್ರೀಂ ಕೋರ್ಟ್ 1,200 ಮೆ.ಟನ್‌ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸರ್ಕಾರ ಆಕ್ಸಿಜನ್‌ ಬೆಡ್‌ಗಳ ಪ್ರಮಾಣವನ್ನು ಇನ್ನೂ 20,000 ಕ್ಕೆ ಹೆಚ್ಚಿಸಲು ಮುಂದಾಗಿದೆ ಎಂದು ಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಪ್ರಕಟಿಸಿದರು.
ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 20,000 ಆಕ್ಸಿಜನ್‌ ಬೆಡ್‌ಗಳ ಪೈಕಿ ತಕ್ಷಣವೇ ತುರ್ತಾಗಿ 10,000 ಬೆಡ್‌ ವ್ಯವಸ್ಥೆ ಮಾಡಲಾಗುವುದು. ಇದರೊಂದಿಗೆ ರಾಜ್ಯದಲ್ಲಿ ಉಂಟಾಗಿರುವ ಆಕ್ಸಿಜನ್‌ ಬೆಡ್‌ಗಳ ಹಾಹಾಕಾರ ನೀಗಲಿದೆ ಎಂದರು.
ಕೋವಿಡ್‌ ಬರುವ ಮುನ್ನ ರಾಜ್ಯದಲ್ಲಿ ದಿನಕ್ಕೆ 100 ಮೆ.ಟನ್‌ ಆಕ್ಸಿಜನ್‌ ಮಾತ್ರ ಖರ್ಚಾಗುತ್ತಿತ್ತು. ಆದರೆ, ಈಗ ನಿತ್ಯವೂ 950 ಮೆ.ಟನ್‌ ಬೇಕಾಗುತ್ತಿದೆ. ಸದ್ಯಕ್ಕಿರುವ ಆಕ್ಸಿಜನ್‌ ಬೆಡ್‌ಗಳಿಗೆ ಸಾಕಾಗುವಷ್ಟು ಆಮ್ಲಜನಕ ನಮ್ಮಲ್ಲಿದೆ. ಆದರೆ, ಸೋಂಕಿತರು ಹೆಚ್ಚುತ್ತಿರುವುದರಿಂದ ಅನಿವಾರ್ಯವಾಗಿ ಬೆಡ್‌ಗಳನ್ನೂ ಹೆಚ್ಚಿಸಬೇಕಾಗಿರುವುದರಿಂದ ಹೆಚ್ಚುವರಿ ಆಮ್ಲಜನಕವೂ ಬೇಕಿದೆ ಎಂದು ಹೇಳಿದರು.
ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲೂ ಆಕ್ಸಿಜನ್‌ ಬೆಡ್‌ ಹಾಕಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಈಗ ರಾಜ್ಯದಲ್ಲಿ 70,000 ಬೆಡ್‌ಗಳನ್ನು ಕೋವಿಡ್‌ಗೆ ಮೀಸಲಾಗಿ ಇಡಲಾಗಿದ್ದು, ಈ ಪೈಕಿ ಸರಕಾರದಿಂದ 35,000 ಹಾಗೂ ಖಾಸಗಿ ಆಸ್ಪತ್ರೆಗಳ ವತಿಯಿಂದ 35,000 ಬೆಡ್‌ಗಳಿವೆ. ಈ ಒಟ್ಟು ಬೆಡ್‌ಗಳ ಪೈಕಿ 50,000 ಆಕ್ಸಿಜನ್‌ ಬೆಡ್‌ಗಳಿವೆ ಎಂದರು.
ರೆಮ್ಡಿಸಿವಿರ್‌ ಸಮಸ್ಯೆ ಇಲ್ಲ:
ರೆಮ್ಡಿಸಿವಿರ್‌ ಕೊರತೆ ಈಗಿಲ್ಲ. 9 ನೇ ತಾರೀಖಿನವರೆಗೂ 30,900 ಡೋಸ್‌ ಹಂಚಿಕೆಯಾಗಿತ್ತು. ಇನ್ನು 70,000 ಡೋಸ್‌ ಬರುವುದು ಬಾಕಿ ಇದೆ. ಇವತ್ತು-ನಾಳೆಗೆ ಕೊರತೆ ಇಲ್ಲ. ಎಲ್ಲ ಜಿಲ್ಲೆಗಳಿಗೂ ಹಂಚಿಕೆ ಮಾಡಲಾಗಿದೆ. 10 ನೇ ತಾರೀಖಿನ ನಂತರ ಒಂದು ವಾರ ಕಾಲ 2,60,000 ಡೋಸ್ ಹಂಚಿಕೆಯಾಗಿದ್ದು, ಈ ಲೆಕ್ಕದ ಪ್ರಕಾರ ಪ್ರತಿದಿನ ರಾಜ್ಯಕ್ಕೆ 37,000 ಡೋಸ್ ಲಭ್ಯವಾಗುತ್ತಿದೆ. ಹೀಗಾಗಿ ಕೊರತೆ ಪ್ರಶ್ನೆ ಇಲ್ಲ ಎಂದು ತಿಳಿಸಿದರು.
ಕೋವಿಡ್‌ ರಿಸಲ್ಟ್‌ ತಡವಾದರೆ ಲ್ಯಾಬ್‌ಗೆ ದಂಡ:
ಇನ್ನು ಮುಂದೆ 24 ಗಂಟೆ ಒಳಗಾಗಿ ಕೋವಿಡ್‌ ಪರೀಕ್ಷೆ ರಿಸಲ್ಟ್‌ ನೀಡಲಾಗುವುದು. ಯಾವ ಲ್ಯಾಬೇ ಆಗಿರಲಿ. ಅದು ಖಾಸಗಿಯಾಗಿರಲಿ ಅಥವಾ ಸರಕಾರದ್ದೇ ಆಗಿರಲಿ ಸರ್ಕಾರ ನಿಗದಿ ಮಾಡಿದ ಸಮಯದೊಳಗೆ ಫಲಿತಾಂಶ ನೀಡದಿದ್ದರೆ ಪ್ರತಿ ಟೆಸ್ಟಿಗೆ 100ರಿಂದ 150 ರೂಪಾಯಿ ದಂಡ ವಿಧಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದ್ದಾರೆ.
ಆರ್‌ಟಿಪಿಸಿಆರ್‌ ಟೆಸ್ಟ್‌ಗೆ ವೇಗ ಕೊಡಲಾಗಿದೆ. ಕೋವಿಡ್‌ ಬಂದಾಗ ಸರ್ಕಾರಿ ವಲಯದಲ್ಲಿ ಕೇವಲ ಒಂದೇ ಲ್ಯಾಬ್‌ ಇತ್ತು. ಇವತ್ತು 91 ಲ್ಯಾಬ್‌ಗಳಿವೆ. ಖಾಸಗಿ ವಲಯದಲ್ಲಿ 150 ಲ್ಯಾಬ್‌ಗಳಿವೆ. ದಿನಕ್ಕೆ ಸರಕಾರದ ವತಿಯಿಂದ 10,500 ಟೆಸ್ಟ್‌ಗಳನ್ನು ಮಾಡಬಹುದು. ಖಾಸಗಿ ಲ್ಯಾಬ್‌ಗಳಲ್ಲಿ 70,000 ಜನರಿಗೆ ಟೆಸ್ಟ್‌ ಆಗುತ್ತಿದೆ. ಅಂಕಿ-ಅಂಶಗಳ ಪ್ರಕಾರ 93% ಆರ್‌ಟಿಪಿಸಿಆರ್‌ ಟೆಸ್ಟ್‌ ಆಗುತ್ತಿದ್ದರೆ, 7% ಮಾತ್ರ ರಾಟ್‌ ಟೆಸ್ಟ್‌ ಆಗುತ್ತಿದೆ. ಈಗ ರಾಟ್‌ ಟೆಸ್ಟ್‌ ಅನ್ನು ಎಷ್ಟು ಬೇಕಾದರೂ ಮಾಡಲು ಐಸಿಎಂಆರ್‌ ಒಪ್ಪಿಗೆ ಕೊಟ್ಟಿದ್ದು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ರಾಟ್‌ ಕಿಟ್‌ಗಳನ್ನು ಒದಗಿಸಿ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು ಎಂದರು.
ವಿಧಾನಪರಿಷತ್‌ ಸದಸ್ಯ ರವಿಕುಮಾರ್‌, ಪಕ್ಷದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಬಿಜೆಪಿ ಮಾಧ್ಯಮ ಸಂಚಾಲಕ ಪ್ರಶಾಂತ್‌ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss