ಹೊಸ ದಿಗಂತ ವರದಿ, ವಿಜಯಪುರ:
ನಗರದ ಜೆಎಸ್ಎಸ್ ಕಾಲೇಜಿನಲ್ಲಿ ಭಾನುವಾರ ನಡೆದ ಎಫ್ಡಿಎ ಪರೀಕ್ಷೆಯಲ್ಲಿ ನಕಲು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪರೀಕ್ಷಾರ್ಥಿ ಮಲಿಕಷಾ ಕೊರಬು, ಕಾಲೇಜಿನ ಸಿಪಾಯಿ ಅಯೂಬ್ ಮುಜಾವರ ಈ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಅಯೂಬ್ ಮುಜಾವರ ಈತನು, ಭಾನುವಾರ ಬೆಳಗ್ಗೆ ನಡೆದ ಎಫ್ಡಿಎ ಸಾಮಾನ್ಯ ಜ್ಞಾನ ವಿಷಯದ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಯಾದ ಮಲಿಕಷಾ ಕೊರಬು (ನೋಂ.5147677) ಈತನಿಗೆ ಕೀ ಉತ್ತರದ ನಕಲು ಚೀಟಿ ನೀಡಿದ್ದಾನೆ.
ಇದನ್ನು ಕಂಡ ಇತೆರೆ ಪರೀಕ್ಷಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದು, ಕಾಲೇಜ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ಪ್ರಕರಣ ಸುದ್ದಿಯಾಗುತ್ತಿದ್ದಂತೆ, ಡಿಡಿಪಿಐ ಎನ್.ವಿ. ಹೊಸೂರ, ಎಡಿಸಿ ರಮೇಶ ಕಳಸದ ಹಾಗೂ ಎಸ್ಪಿ ಅನುಪಮ್ ಅಗರವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸಿದ್ದಾರೆ.
ಪರೀಕ್ಷಾರ್ಥಿ ಮಲಿಕಷಾ ಕೊರಬು ಈತನ ಒಎಂಆರ್ ಶೀಟನ್ನು ಪ್ರತ್ಯೇಕಿಸಿ, ಸೀಲ್ ಮಾಡಿ, ನಕಲು ಪ್ರಕರಣವೆಂದು ಪರಿಗಣಿಸಿ ಪರೀಕ್ಷಾ ನಿಯಂತ್ರಣಾಧಿಕಾರಿಗಳಿಗೆ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಡಲಾಗಿದೆ.
ನಗರದ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.