ಹೊಸದಿಗಂತ ವರದಿ, ಮಂಡ್ಯ:
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಂಡ್ಯ ತಾಲೂಕಿನ ಕೋಣನಹಳ್ಳಿ ಮಹಿಳಾ ಮೀನುಗಾರರ ಸಹಕಾರ ಸಂಘದ ಆವರಣದಲ್ಲಿ ಜಿಲ್ಲಾ ಪಂಚಾಯತ್ ಯೋಜನೆಯಡಿ 50 ವೃತ್ತಿಪರ ಮಹಿಳಾ ಮೀನುಗಾರರಿಗೆ ಮೀನುಗಾರಿಕೆ ಕೃಷಿ ಹಾಗೂ ತಂತ್ರಾಂಶಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೋಣನಹಳ್ಳಿ ಕೆರೆಯಲ್ಲಿ ಮಹಿಳಾ ಮೀನುಗಾರರಿಗೆ ದೋಣಿ ಬಿಟ್ಟು ಮೀನು ಹಿಡಿಯುವ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತುಘಿ. ನಂತರ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಬ್ಬಿನ್ ಬೋಪಣ್ಣ ಮಾತನಾಡಿ, ಮೀನುಗಾರರ ಆರ್ಥಿಕ ಮಟ್ಟವನ್ನು ಸುಧಾರಿಸಿ ಅವರನ್ನು ಮೇಲೆತ್ತಲು ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯಡಿ ಮೀನುಗಾರರಿಗೆ ಅನೇಕ ಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಲ್ಲಿ ಮೀನುಗಾರರು ಸಿಗುವಂತಹ ಸೌಲಭ್ಯವನ್ನು ಪಡೆದುಕೊಳ್ಳಬೇಕು. ದೇಶದಲ್ಲಿ 4 ಸಾವಿರ ಕೋಟಿ ಹಣ ಬಿಡುಗಡೆ ಮಾಡಿ ಮೀನುಗಾರರಿಗೆ ಸವಲತ್ತನ್ನು ಕಲ್ಪಿಸಲಾಗಿದೆ. ಕೆರೆಯಲ್ಲಿ ಮೀನು ಹಿಡಿಯುವುದು, ಮೀನು ಸಾಕಾಣಿಕೆ ಮಾರುಕಟ್ಟೆ ಮಾಡಲು ಇತರೆ ಒಟ್ಟಾರೆ ಈ ಯೋಜನೆಯಡಿ ಸಾಲ ಸೌಲಭ್ಯಗಳನ್ನು ಕೊಡಲಾಗುತ್ತದೆ ಎಂದು ಹೇಳಿದರು.
ಮಹಿಳಾ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷೆ ಗಾಯಿತ್ರಿ ಮಾತನಾಡಿ, ಮೀನುಗಾರರು ಕೂಲಿ ನಂಬಿ ಮೀನುಗಾರಿಕಾ ವೃತ್ತಿಯಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ. ಸರ್ಕಾರ ಮಹಿಳೆಯರಿಗೆ ಮೀನುಗಾರಿಕೆ ಇಲಾಖೆಯಲ್ಲಿ ಯೋಜನೆಗಳನ್ನು ಮಾಡಿಕೊಡಬೇಕು. ವೃತ್ತಿನಿರತ ಮಹಿಳಾ ಮೀನುಗಾರರಿಗೆ ಇಲಾಖೆ ಸವಲತ್ತುಗಳನ್ನು ಕೊಡುತ್ತಿದೆ. ಪುರುಷರಂತೆ ನಾವೂ ಸಹ ಮೀನುಗಾರಿಕೆಯಲ್ಲಿ ನಾವೂ ತೊಡಗಿಸಿಕೊಳ್ಳುತ್ತೇವೆ ಎಂದರು.