Thursday, August 18, 2022

Latest Posts

ಮಹಿಳಾ ಎಸ್.ಐ. ಮೇಲೆ ಹಲ್ಲೆ: ಸಹೋದರಿಯರ ಬಂಧನ

ಹೊಸ ದಿಗಂತ ವರದಿ ಪುತ್ತೂರು:

ದೂರು ಅರ್ಜಿಯೊಂದರ ವಿಚಾರಣೆ ವೇಳೆ ಮಹಿಳೆಯೊಬ್ಬರು ತನ್ನ ಗಂಡನಿಗೆ ಹಲ್ಲೆ ನಡೆಸಲು ಮುಂದಾದಾಗ ತಡೆಯಲು ಹೋದ ಮಹಿಳಾ ಠಾಣಾ ಎಸ್.ಐ. ಅವರಿಗೆ ಮಹಿಳೆಯರಿಬ್ಬರು ಹಲ್ಲೆ ನಡೆಸಿದ ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾ.1 ರಂದು ನಡೆದಿದೆ. ಹಲ್ಲೆ ನಡೆಸಿದ ಆರೋಪಿ ಸಹೋದರಿಯರಿಬ್ಬರನ್ನು ಬಂಧಿಸಲಾಗಿದೆ.

ಮಹಿಳಾ ಪೊಲೀಸ್ ಠಾಣೆಯ ಎಸ್.ಐ. ಸೇಸಮ್ಮ ಅವರು ಹಲ್ಲೆಗೊಳಗಾದವರು. ಸಾಲ್ಮರ ಮುದ್ದೋಡಿ ನಿವಾಸಿ ಲಾರೆನ್ಸ್ ಡಿ’ಸೋಜ ಅವರ ಪತ್ನಿ ಬೇಬಿ ಡಿ’ಸೋಜ(34) ಮತ್ತು ಹಾಸನ ಚೆನ್ನರಾಯಪಟ್ಟಣದ ನುಗ್ಗೆಹಳ್ಳಿ ನೆಟ್ಟಕೆರೆ ಗೋಪಾಲ ಎಂಬವರ ಪತ್ನಿ ಆಶಾ(35) ಹಲ್ಲೆ ನಡೆಸಿದ ಆರೋಪಿಗಳು ಎಂದು ಹೆಸರಿಸಲಾಗಿದೆ.

ಘಟನೆ ವಿವರ…
ಫೆ.28 ರಂದು ಸಂಬಂಧಿ ಸುನಿತಾ ಡಿ’ಸೋಜಾ ಎಂಬವರು ಬೇಬಿ ಡಿ’ಸೋಜಾ ವಿರುದ್ಧ ಮತ್ತು ಬೇಬಿ ಡಿ’ಸೋಜಾ ಅವರು ಸುನಿತಾ ಡಿ’ಸೋಜಾ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆಗಾಗಿ ಅವರಿಬ್ಬರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಈ ಸಂದರ್ಭ ಬೇಬಿ ಡಿ’ಸೋಜ ಅವರ ಅಕ್ಕ, ಹಾಸನದಲ್ಲಿರುವ ಆಶಾ ಕೂಡಾ ಜೊತೆಗೆ ಬಂದಿದ್ದರು. ಎಸ್.ಐ. ಸೇಸಮ್ಮ ಅವರು ಕುಟುಂಬ ಸಮಸ್ಯೆಯನ್ನು ನಯವಾಗಿ ವಿಚಾರಿಸುತ್ತಿದ್ದ ವೇಳೆ ಬೇಬಿ ಡಿ’ಸೋಜಾ ಪತಿ ಲಾರೆನ್ಸ್ ಡಿ’ಸೋಜಾರಿಗೆ ಹಲ್ಲೆ ನಡೆಸಲು ಮುಂದಾಗಿದ್ದರು.

ಇದನ್ನು ಗಮನಿಸಿದ ಎಸ್.ಐ. ಸೇಸಮ್ಮ ಹಲ್ಲೆ ನಡೆಯುವುದನ್ನು ತಪ್ಪಿಸಿದರು. ಈ ವೇಳೆ ಬೇಬಿ ಡಿ’ಸೋಜ ಮತ್ತು ಆಕೆಯ ಅಕ್ಕ ಆಶಾ ಎಸ್.ಐ. ಸೇಸಮ್ಮ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಬಳಿಕ ಎಸ್.ಐ. ಸೇಸಮ್ಮ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಘಟನೆಯ ಕುರಿತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಬೇಬಿ ಡಿ’ಸೋಜ ಮತ್ತು ಆಶಾ ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!