ಬಲಿಷ್ಠ ಬ್ರೆಜಿಲ್‌ ಟ್ರೋಫಿ ಕನಸು ಭಗ್ನ..! ಪೆನಾಲ್ಟಿ ಶೂಟೌಟ್‌ ನಲ್ಲಿ ಗೆದ್ದು ಸೆಮೀಸ್‌ ಗೆ ಲಗ್ಗೆ ಇಟ್ಟ ಕ್ರೊವೇಷಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕತಾರ್‌ ನಲ್ಲಿ ಸಾಗುತ್ತಿರುವ ಫಿಫಾ ವಿಶ್ವಕಪ್‌ ನಲ್ಲಿ ದೊಡ್ಡ ಅಚ್ಚರಿಯ ಫಲಿತಾಂಶವೊಂದು ಹೊರಬಿದ್ದಿದೆ. ಮೊದಲ ಕ್ವಾರ್ಟರ್​ ಫೈನಲ್​ನಲ್ಲಿ ಕ್ರೊವೇಶಿಯಾ ವಿರುದ್ಧ ಪೆನಾಲ್ಟಿ ಶೂಟೌಟ್​ನಲ್ಲಿ ಸೋಲಿನ ಆಘಾತ ಅನುಭವಿಸಿದ ಬ್ರೆಜಿಲ್‌ ಟೂರ್ನಿಗೆ ಕಣ್ಣೀರಿನ ವಿದಾಯ ಹೇಳಿದೆ. ಈ ಮೂಲಕ ಬ್ರೆಜಿಲ್​ 4 ನೇ ಬಾರಿಗೆ ಕ್ವಾರ್ಟರ್​ ಸೋಲಿನ ನಿರಾಸೆ ಅನುಭವಿಸಿದೆ.
ನಿಗದಿತ 90 ನಿಮಿಷದಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಫಲಿತಾಂಶ ಪಡೆಯಲು 30 ನಿಮಿಷಗಳ ಹೆಚ್ಚುವರಿ ಅವಧಿ ನೀಡಲಾಯಿತು. 105 ನೇ ನಿಮಿಷದಲ್ಲಿ ನೇಮಾರ್‌ ಅದ್ಭುತ ಗೋಲು ಸಿಡಿಸಿ ಕ್ರೀಡಾಂಗಣದಲ್ಲಿ ಮಿಂಚುಹರಿಸಿದರು. ಆದರೆ ಬ್ರೆಜಿಲ್ ಸಂತಸ ತುಂಬಾ ಹೊತ್ತು ಉಳಿಯಲಿಲ್ಲ. ಕ್ರೊವೇಷಿಯಾದ ಬ್ರುನೊ ಪೆಟ್ಕೊವಿಚ್ 116 ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು. ಹೆಚ್ಚುವರಿ ಅವಧಿಯಲ್ಲೂ ಪಂದ್ಯ 1-1 ಗೋಲುಗಳಿಂದ ಸಮವಾಗಿದ್ದರಿಂದ ಅಂತಿಮವಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಮೊದಲ ಶೂಟೌಟ್‌ ನಲ್ಲೇ ಬ್ರೆಜಿಲ್‌ ಹೃದಯ ಭಗ್ನವಾಯಿತು.ರೋಡ್ರಿಗೋ ಒದ್ದ ಮೊದಲ ಪೆನಾಲ್ಟಿ ಶೂಟ್ ಅನ್ನು ಕ್ರೊವೇಷಿಯಾ ಗೋಲ್‌ ಕೀಪರ್ ಡೊಮಿನಿಕ್ ಲಿವಕೊವಿಚ್ ತಡೆದು ತಂಡದ ಅಭಿಮಾನಿಗಳಲ್ಲಿ ಸಂತಸದ ಅಲೆ ಉಕ್ಕಿಸಿದರು. ಆ ಬಳಿಕ ಕ್ರೊವೇಷಿಯಾ ಪರ ನಿಕೋಲಾ ವ್ಲಾಸಿಕ್, ಮಿಸ್ಲಾವ್ ಓರ್ಸಿಕ್, ಲೊವ್ರೊ ಮಜರ್ ಮತ್ತು ಲುಕಾ ಮೊಡ್ರಿಕ್ ಗೋಲು ಸಿಡಿಸಿದರೆ, ಬೆಜಿಲ್‌ 4 ರಲ್ಲಿ ಎರಡು ಅವಕಾಶವನ್ನಷ್ಟೇ ಗೋಲಾಗಿ ಪರಿವರ್ತಿಸಲು ಶಕ್ತವಾಗಿ ಸೋಲು ಒಪ್ಪಿಕೊಂಡಿತು. ಸೋತ ಬಳಿಕ ದಿಗ್ಗಜ ಆಟಗಾರ ನೇಮಾರ್‌ ಮೈದಾನಲ್ಲೇ ಕಣ್ಣೀರಿಟ್ಟು ರೋಧಿಸಿದ್ದು, ಅಭಿಮಾನಿಗಳ ಕಣ್ಣಂಚನ್ನೂ ಒದ್ದೆ ಮಾಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!