Wednesday, August 17, 2022

Latest Posts

ತುಂಬಿದ ಕೆರೆ ಕಟ್ಟೆಗಳಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬಾಗಿನ ಅರ್ಪಣೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ನಗರದ ಕೆಲವು ಬಡಾವಣೆಗಳಲ್ಲಿ ಪೈಪ್ ಲೈನ್ ಮೂಲಕ ಮನೆ, ಮನೆಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಬಡಾವಣೆಗಳಲ್ಲೂ ಪೈಪ್‌ಲೈನ್ ಮೂಲಕ ಅಡಿಗೆ ಅನಿಲ ಪೂರೈಕೆ ವ್ಯವಸ್ಥೆ ಮಾಡಲಾಗುವುದು ಎಂದು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಐತಿಹಾಸಿಕ ಚಂದ್ರವಳ್ಳಿ ಕೆರೆ ಹಾಗೂ ಸಿಹಿನೀರು ಹೊಂಡಕ್ಕೆ ಭಾನುವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ನೂರಾರು ಕೋಟಿ ಅನುದಾನ ವಿನಿಯೋಗಿಸಿ ರಸ್ತೆಗಳನ್ನು ನಿರ್ಮಿಸಿದ್ದರೂ ಮನೆ, ಮನೆ ಗ್ಯಾಸ್ ಸಂಪರ್ಕಕ್ಕಾಗಿ ಪೈಪ್ ಲೈನ್ ಅಳವಡಿಸಲು ಮತ್ತೆ ರಸ್ತೆ ಅಗೆಯುತ್ತಿರುವುದು ನೋವಿನ ಸಂಗತಿ. ಆದರೆ ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಗೆ ಮುಂಗಡವಾಗಿ ಹಣ ಪಾವತಿಸಿ ರಸ್ತೆ ರಸ್ತೆ ಅಗೆಯಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ನಗರದ ಒಳಚರಂಡಿ ವ್ಯವಸ್ಥೆಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಮತ್ತಷ್ಟು ಅನುದಾನ ತಂದು ಯುಜಿಡಿ ಪೂರ್ಣಗೊಳಿಸಲಾಗುತ್ತದೆ. ರಸ್ತೆ ವಿಸ್ತರಣೆಗಾಗಿ ಕಡಿದ ಮರಗಳಿಗೆ ಪರ್ಯಾಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಬಿ.ಪಿ.ಎಲ್. ಕಾರ್ಡ್ ವಿಚಾರದಲ್ಲಿ ಯಾವುದೇ ಗೊಂದಲ ಇದ್ದರೂ ಬಗೆಹರಿಸಲಾಗುವುದು ಎಂದು ಹೇಳಿದರು.
ಹಿಂದೆ ಪಾಳೇಗಾರರ ಕಾಲದಲ್ಲಿ ತಂತ್ರಜ್ಞಾನ, ಇಂಜಿನಿಯರ್‌ಗಳು ಇಲ್ಲದ ಸಮಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕೆರೆ, ಕಟ್ಟೆಗಳನ್ನು ನಿರ್ಮಿಸಲಾಗಿದೆ. ಗೋಪಾಲಸ್ವಾಮಿ ಹೊಂಡ ತುಂಬಿದ ನಂತರ ಅಕ್ಕ-ತಂಗಿ ಹೊಂಡಗಳು, ಸಿಹಿನೀರು ಹೊಂಡ, ಸಂತೆ ಹೊಂಡ, ಮಲ್ಲಾಪುರ ಕೆರೆ, ಗೊನೂರು ಕೆರೆ, ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ, ಮಧುರೆ ಕೆರೆ ಮೂಲಕ ಚಳ್ಳಕೆರೆ ತಾಲೂಕಿನ ರಾಣಿಕೆರೆಗೆ ತಲುಪುತ್ತದೆ. ಬಳಿಕ ಆಂಧ್ರದವರೆಗೂ ಹರಿಯುತ್ತದೆ. ಹೀಗೆ ಕೆರೆಗಳು ತುಂಬುವುದರಿಂದ ಅಂತರ್ಜಲ ಮಟ್ಟ ಹೆಚ್ಚಲು ಸಹಕಾರಿಯಾಗಿದೆ ಎಂದರು.
ಸಿಹಿನೀರು ಹೊಂಡ ಕಳೆದ ೩-೪ ವರ್ಷದಿಂದ ಕೋಡಿ ಬೀಳುತ್ತಿದೆ. ನಗರಕ್ಕೆ ನೀರಿನ ಭರವಿಲ್ಲ. ೨೦೦೮ ರಿಂದ ನೀರಿನ ಕೊರತೆ ನೀಗಿದೆ. ಕೇಂದ್ರ ಸಕಾರದಿಂದ ಅಮೃತ ನಗರ ಯೋಜನೆಯಡಿ ೧೪೦ ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ೧೧೨ ಕೋಟಿ ಕುಡಿಯುವ ನೀರಿನ ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿದೆ. ಮನೆಗಳಿಗೆ ಮೀಟರ್ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ನಗರಸಭೆ ಸದಸ್ಯರಾದ ಪಿ.ಕೆ. ಮೀನಾಕ್ಷಿ, ಭಾಗ್ಯಮ್ಮ ಆನಂದ, ತಾರಕೇಶ್ವರಿ, ಎಚ್. ಶ್ರೀನಿವಾಸ್, ನಾಮ ನಿರ್ದೇಶಿತ ಸದಸ್ಯೆ ಶ್ವೇತ ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ರೇಖಾ, ನಗರಸಭೆ ಪೌರಾಯುಕ್ತ ಸತೀಶ್ ರೆಡ್ಡಿ, ಮುಖಂಡರಾದ ಜಯಶಂಕರ್, ಮಹೇಶ್, ವೇದ, ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!