ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೋವಿಡ್ ನಿರ್ವಹಣಾ ಕರ್ತವ್ಯಗಳಲ್ಲಿ ವೈದ್ಯಕೀಯ ಇಂಟರ್ನಿಗಳನ್ನು ಅವರ ಬೋಧಕವರ್ಗದ ಮೇಲ್ವಿಚಾರಣೆಯಲ್ಲಿ ನಿಯೋಜಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪರಿಶೀಲನಾ ಸಮಿತಿ ನಿರ್ಧರಿಸಿತು. ಇದರ ಜೊತೆಗೆ ಕರ್ತವ್ಯದಲ್ಲಿ ತೊಡಗಿರುವ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಲಸಿಕೆ ಹಾಕಲು ಸಮಿತಿ ನಿರ್ಧರಿಸಿದೆ.
ಕೋವಿಡ್-19 ಸೋಂಕು ವ್ಯಾಪಿಸುತ್ತಿರುವ ವೇಗಕ್ಕೆ ದೇಶದಲ್ಲಿ ಸದ್ಯ ಇರುವ ವೈದ್ಯಕೀಯ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿ ಎಲ್ಲವುದರ ಕೊರತೆಯಾಗಿದ್ದು, ಈ ವೇಳೆ ರೋಗಕ್ಕೆ ಸ್ಪಂದಿಸುವಲ್ಲಿ ಸಮರ್ಪಕ ಮಾನವ ಸಂಪನ್ಮೂಲಗಳ ಅಗತ್ಯವನ್ನು ಪ್ರಧಾನಿ ಮೋದಿ ಪರಿಶೀಲಿಸಿದರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಲಭ್ಯತೆಯನ್ನು ಹೆಚ್ಚಿಸುವಂತಹ ನಿರ್ಧಾರಗಳನ್ನು ತೆಗೆದುಕೊಂಡರು.
ಕೋವಿಡ್ ಸಂಬಂಧಿತ ಕರ್ತವ್ಯಗಳಲ್ಲಿ ತೊಡಗಿರುವ ಎಲ್ಲ ಆರೋಗ್ಯ ವೃತ್ತಿಪರರನ್ನು ಆರೋಗ್ಯ ಕಾರ್ಯಕರ್ತರಿಗೆ ಸರ್ಕಾರದ ವಿಮಾ ಯೋಜನೆಯಡಿ ಒಳಪಡಿಸಲಾಗುತ್ತದೆ ಎಂದು ಸಮಿತಿ ಹೇಳಿದೆ.
100 ದಿನಗಳ ಕೋವಿಡ್ ಕರ್ತವ್ಯಗಳನ್ನು ಪೂರೈಸುವ ವೈದ್ಯಕೀಯ ಸಿಬ್ಬಂದಿಗೆ ಭಾರತ ಸರ್ಕಾರದಿಂದ ಪ್ರಧಾನ ಮಂತ್ರಿಯ ಡಿಸ್ಟಿಂಗ್ವಿಶ್ಡ್ ಕೋವಿಡ್ ನ್ಯಾಷನಲ್ ಸರ್ವಿಸ್ ಸಮ್ಮನ್ ನೀಡಲಾಗುವುದು ಮತ್ತು ಮುಂಬರುವ ನಿಯಮಿತ ಸರ್ಕಾರಿ ನೇಮಕಾತಿಗಳಲ್ಲಿ ಸಹ ಆದ್ಯತೆ ನೀಡಲಾಗುವುದು.