ಜಾಗತಿಕ ಮಾಧ್ಯಮಗಳಿಗೂ ಆರ್ಥಿಕ ಸಂಕಷ್ಟ- ಉದ್ಯೋಗ ಕಡಿತ ಘೋಷಿಸಿದ ಸಿಎನ್ಎನ್, ವೋಕ್ಸ್, ವಾಷಿಂಗ್ಟನ್ ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಸಂಕಷ್ಟದಿಂದ ಅಮೇಜಾನ್‌, ಟ್ವೀಟರ್‌, ಮೈಕ್ರೋಸಾಫ್ಟ್‌, ಗೂಗಲ್‌ ಸೇರಿದಂತೆ ಜಾಗತಿಕ ಟೆಕ್‌ ದಿಗ್ಗಜ ಕಂಪನಿಗಳು ಉದ್ಯೋಗ ಕಡಿತ ಮಾಡಿರುವ ಸುದ್ದಿಗಳನ್ನು ನೀವು ಓದಿರುತ್ತೀರಿ, ಕಾರ್ಪೋರೇಟ್‌ ವಲಯದಲ್ಲಿ ಉದ್ಯೋಗ ಕಡಿತ ಮುಂದುವರಿದಿರುವ ಸುದ್ದಿಗಳ ನಡುವೆಯೇ ಇದೀಗ ಜಾಗತಿಕ ಮಾಧ್ಯಮಗಳಿಗೂ ಆರ್ಥಿಕ ಸಂಕಷ್ಟದ ಕರಿನೆರಳು ಆವರಿಸಿದ್ದು ಸಿಎನ್ಎನ್, ವೋಕ್ಸ್, ವಾಷಿಂಗ್ಟನ್ ಪೋಸ್ಟ್ ಮುಂತಾದ ಜಾಗತಿಕ ಮಾಧ್ಯಮಗಳು ಉದ್ಯೋಗ ಕಡಿತವನ್ನು ಘೋಷಿಸಿವೆ.

Vox,The Verge ವೆಬ್‌ಸೈಟ್‌ ಮತ್ತು ನ್ಯೂಯಾರ್ಕ್ ಮ್ಯಾಗಜೀನ್ ಸೇರಿದಂತೆಅಮೆರಿಕದ ಪ್ರಮುಖ ಮಾಧ್ಯಮ ವೇದಿಕೆಗಳ ಮಾಲೀಕತ್ವ ಹೊಂದಿರುವ ವೋಕ್ಸ್‌ (VOX) ಮೀಡಿಯಾ ತನ್ನ 7 ಶೇಕಡಾ ಉದ್ಯೋಗಿಗಳನ್ನು ಕೈ ಬಿಡುತ್ತಿರುವುದಾಗಿ ಘೋಷಿಸಿದೆ. ಇದಲ್ಲದೇ ಇತರ ಪ್ರಮುಖ ಮಾಧ್ಯಮಗಳಾದ CNN, NBC, MSNBC, Buzzfeed ಮತ್ತು ಇತರರೂ ಕೂಡ ಉದ್ಯೋಗಿಗಳ ವಜಾಗೊಳಿಸುವಿಕೆಯನ್ನು ಘೋಷಿಸಿವೆ ಎಂದು ಮೂಲಗಳು ವರದಿ ಮಾಡಿವೆ.

“ಪತ್ರಿಕೋದ್ಯಮವು ದೀರ್ಘಕಾಲದಿಂದ ಒತ್ತಡದಲ್ಲಿದೆ ಮತ್ತು ಹಲವಾರು ಕಂಪನಿಗಳು ತಮ್ಮ ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡಲು ಮುಂದಾಗಿವೆ” ಎಂದು ರೈಟರ್ಸ್ ಗಿಲ್ಡ್ ಆಫ್ ಅಮೇರಿಕಾ ಹೇಳಿರುವುದಾಗಿ ಎಎಫ್‌ಪಿ ಮಾಧ್ಯಮ ವರದಿ ಮಾಡಿದೆ. ವಾಷಿಂಗ್ಟನ್ ಪೋಸ್ಟ್‌ನಲ್ಲಿಯೂ ಇದೇ ರೀತಿಯ ಪ್ರಕಟಣೆ ಹೊರಬಿದ್ದಿದ್ದು ಸಿಇಒ ಫ್ರೆಡ್ ರಿಯಾನ್ ಕಳೆದ ತಿಂಗಳು “ಹಲವಾರು ಸ್ಥಾನಗಳನ್ನು” ಮುಂದಿನ ವಾರಗಳಲ್ಲಿ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇದು ಸುಮಾರು 2500 ಉದ್ಯೋಗಿಗಳನ್ನು ಬಾಧಿಸಬಹುದು ಎನ್ನಲಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ CNN ಒಟ್ಟು 4,000 ಜನರಲ್ಲಿ ಅಂದಾಜು ನೂರಾರು ಕಾರ್ಮಿಕರನ್ನು ವಜಾಗೊಳಿಸಿದೆ ಎನ್ನಲಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!