ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಡಿಕೇರಿ:
ಸರ್ಕಾರದ ಮಾರ್ಗಸೂಚಿಯಂತೆ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕಾಗಿ ಅಂಗಡಿಗಳನ್ನು ತೆರೆಯಲಾಗುತ್ತಿದೆ. ಆದರೆ ಜನರು ಸಹನೆ ಕಳೆದುಕೊಂಡು ಅಂಗಡಿಯ ಎದುರು ನೂಕುನುಗ್ಗಲು ಮಾಡುತ್ತಿದ್ದು, ಪೊಲೀಸರು ಹಾಗೂ ನಗರಸಭಾ ಅಧಿಕಾರಿಗಳು ವಿನಾಕಾರಣ ವರ್ತಕರಿಗೆ ದಂಡ ವಿಧಿಸುತ್ತಿದ್ದಾರೆ ಎಂದು ಆರೋಪಿಸಿರುವ ಮಡಿಕೇರಿ ನಗರದ ಕೆಲವು ವರ್ತಕರು, ದಂಡ ವಿಧಿಸುವುದನ್ನು ಮುಂದುವರೆಸಿದರೆ ಸೋಮವಾರದಿಂದ ಅಂಗಡಿಗಳನ್ನು ತೆರೆಯುವುದಿಲ್ಲ ಎಂಬ ಬೆದರಿಕೆ ಹಾಕಿದ್ದಾರೆ.
ಕೇವಲ 4 ಗಂಟೆಗಳ ಅವಧಿಯಲ್ಲಿ ವ್ಯಾಪಾರ ನಡೆಸಬೇಕಾಗಿದ್ದು, ನಗರ ಮಾತ್ರವಲ್ಲದೆ ಗ್ರಾಮೀಣ ಭಾಗದಿಂದ ಬಂದ ಜನರು ಅಗತ್ಯ ವಸ್ತುಗಳನ್ನು ಖರೀದಿಸುವ ಆತುರದಲ್ಲಿರುತ್ತಾರೆ. ಅಧಿಕಾರಿಗಳ ಸೂಚನೆಯಂತೆ ಅಂಗಡಿಯ ಎದುರು ಅಂತರ ಕಾಯ್ದುಕೊಳ್ಳಲು ಗುರುತುಗಳನ್ನು ಮಾಡಲಾಗಿದೆ. ಜನರಿಗೆ ಎಷ್ಟು ಮನವಿ ಮಾಡಿಕೊಂಡರೂ ನೂಕು ನುಗ್ಗಲು ಉಂಟಾಗುತ್ತಿದೆ. ಇದರಲ್ಲಿ ವರ್ತಕರ ತಪ್ಪಿಲ್ಲ, ಆದರೆ ಅಧಿಕಾರಿಗಳು ಅಂಗಡಿಯ ಎದುರಿನಲ್ಲಿ ಜನಜಂಗುಳಿ ಇದೆ ಎಂದು ಫೋಟೋ ತೆಗೆದು ದಂಡ ವಿಧಿಸುತ್ತಿದ್ದಾರೆ ಎಂದು ವರ್ತಕರು ಆರೋಪಿಸಿದ್ದಾರೆ.
ದಂಡದ ಮೊತ್ತ 500 ರಿಂದ 2 ಸಾವಿರ ರೂ.ವರೆಗೆ ವಿಧಿಸಲಾಗುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ವ್ಯಾಪಾರಿಗಳಿಂದ ಇದನ್ನು ಭರಿಸಲಾಗುತ್ತಿಲ್ಲ. ಆದ್ದರಿಂದ ಪೊಲೀಸರೇ ಜನಜಂಗುಳಿಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದ್ದಾರೆ. ಹಲವು ಅಡೆತಡೆ, ನಷ್ಟಗಳ ನಡುವೆ ಜನರಿಗಾಗಿ ವ್ಯಾಪಾರ ನಡೆಸುತ್ತಿರುವ ವರ್ತಕರಿಗೆ ಅಧಿಕಾರಿಗಳು ಸಹಕಾರ ನೀಡಬೇಕು ಮತ್ತು ಜನರು ಕೂಡ ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ವ್ಯಾಪಾರಿಗಳು ಮನವಿ ಮಾಡಿದ್ದಾರೆ