ಹೊಸದಿಗಂತ ವರದಿ, ವಿಜಯಪುರ:
ರಾಜ್ಯದ ಇತಿಹಾಸದಲ್ಲಿ ಪೊಲೀಸ್ ನವರು ರಾಷ್ಟ್ರದೋಹಿ ಚಟುವಟಿಕೆಗಳ ವಿರುದ್ಧ ಎಫ್ ಐ ಆರ್ ಹಾಕಿದ್ದು ಅಭಿನಂದನಾರ್ಹ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಎಸ್ ಪಿ ಅವರಿಗೆ ಅಭಿನಂದನೆ. ಪೊಲೀಸ್ ಇಲಾಖೆಯ ಬಗ್ಗೆ ಭಯ ಹುಟ್ಟಿಸಿದ್ದಕ್ಕೆ ಅಭಿನಂದನೆ. ಗೃಹ ಸಚಿವರು ಇಂತಹ ಪೊಲೀಸರಿಗೆ ಬೆಂಬಲ, ಪ್ರಶಸ್ತಿ ಕೊಡಬೇಕು ಎಂದರು.
ಗಲಭೆ ಮಾಡಲು ಬಿಡಲ್ಲ ಎಂದು ದಾವಣಗೆರೆ ಯಲ್ಲಿ ಕೈಗೊಂಡ ನಿರ್ಣಯಕ್ಕೆ ಅಭಿನಂದನೆ. ಇಡೀ ರಾಜ್ಯದಲ್ಲಿ ಈ ತರಹ ಪೊಲೀಸರು ಕ್ರಮ ಕೈಗೊಳ್ಳಲಿ ಎಂದರು.
ತಿರುಪತಿ ಲಡ್ಡುವಿನಲ್ಲಿ ಪ್ರಾಣಿಕೊಬ್ಬು ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿದೇಶಿ ಕ್ರಿಶ್ಚಿಯನ್ ಮಷಿನರಿಗಳಿಂದ ಈ ತರಹ ನಡೆದಿದೆ. ಜಗನ್ ಮೋಹನ್ ರೆಡ್ಡಿ ಅವರು ಸಿಎಂ ಆದ ಸಂದರ್ಭದಲ್ಲಿ ಇಡೀ ಪ್ರಪಂಚಕ್ಕೆ ಮಾಡಿದ ಮೋಸ ಇದಾಗಿದ್ದು, ಜಗನ್ ಮೋಹನ್ ರೆಡ್ಡಿ ಅವರಿಗೆ ಬಂಧಿಸುವ ಕೆಲಸವಾಗಬೇಕು ಎಂದರು.
ಹಿಂದುತ್ವದ ಪ್ರತಿಪಾದಕರಿಗೆ, ಹಿಂದುಗಳ ಶ್ರದ್ಧೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಈಗಲೂ ನಾವು ಮಾಡಿಲ್ಲ ಎಂದು ಹೇಳುತ್ತಾರೆ. ಲ್ಯಾಬ್ ರಿಪೊರ್ಟ ಬಗ್ಗೆ ಇವರಿಗೆ ನಂಬಿಕೆ ಇಲ್ಲವಾ ? ನಮ್ಮ ಶ್ರದ್ದೆ ಹಾಗೂ ಶ್ರದ್ದಾ ಕೇಂದ್ರಕ್ಕೆ ಅಪಮಾನ ಮಾಡುವವರಿಗೆ ಇದು ಅಂತ್ಯವಾಗಬೇಕು ಎಂದರು.
ಇದರಲ್ಲಿ ವಿದೇಶ ಸಂಚಿದೆ, ಈ ಪ್ರಕರಣ ಸಿಬಿಐ ಗೆ ತನಿಖೆಗೆ ಕೊಡಬೇಕು. ದೇವರ ದಯೆಯಿಂದ ಇಡೀ ದೇಶದ ಎಲ್ಲ ಪಕ್ಷದ ನಾಯಕರು ಇದನ್ನು ಖಂಡಿಸಿದ್ದಾರೆ. ಇದು ಯಾವುದೇ ಕಾರಣಕ್ಕೂ ಸಹಿಸಲ್ಲ. ತಿರುಪತಿ ತಿಮ್ಮಪ್ಪನ ಬಗ್ಗೆ ಇರುವ ಶ್ರದ್ದೆಯಿಂದ ಎಲ್ಲರೂ ಇದನ್ನು ಖಂಡಿಸಿದ್ದಾರೆ ಎಂದರು.
ಮುನಿರತ್ನ ಹನಿ ಟ್ರ್ಯಾಪ್ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರವಾಗಿ ಮಾತನಾಡಲು ನಮಗೆ ಅಸಹ್ಯವಾಗುತ್ತಿದೆ. ಅದೇ ದರ್ಶನ, ಅದೇ ಮುನಿರತ್ನ ವಿಚಾರ ಟಿವಿಯವರು ಸ್ವಲ್ಪ ಬಿಡಬೇಕು ಎಂದರು.
ಈಶ್ವರಪ್ಪನವರಿಗೆ ಬಿಜೆಪಿಗೆ ಕರೆ ತಂದು ಸಿಎಂ ಮಾಡುತ್ತೇವೆ ಎಂಬ ಯತ್ನಾಳ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಯತ್ನಾಳ ಓರ್ವ ಹಿಂದುತ್ವದ ಹುಲಿ. ಅವರ ಪ್ರೀತಿಯ ಮಾತಿಗೆ ನಾನು ಅಭಿನಂದಿಸುವೆ. ಭಾರತೀಯ ಜನತಾ ಪಾರ್ಟಿಯ ಅವ್ಯವಸ್ಥೆ ಯಿಂದ ನಾನು ಬಿಜೆಪಿ ಬಿಟ್ಟೆ. ಬಿಜೆಪಿ ಪಕ್ಷದಲ್ಲಿ ಹೊಂದಾಣಿಕೆ ರಾಜಕಾರಣ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ನಾನು ಬಿಜೆಪಿ ಬಿಟ್ಟೆ. ಬಿಜೆಪಿ ಪಕ್ಷ ನನ್ನ ತಾಯಿ ಇದ್ದ ಹಾಗೆ ಆ ತಾಯಿ ಬಿಟ್ಟು ನಾನು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ ಎಂದರು.
ಈ ಪಕ್ಷದಲ್ಲಿ ಶುದ್ದೀಕರಣವಾಗಲಿ ಎಂಬ ಕಾರಣಕ್ಕೆ ನಾನು ಪಕ್ಷದಿಂದ ದೂರ ಇದ್ದೇನೆ. ಇವತ್ತಲ್ಲ ನಾಳೆ ಈ ವಿಚಾರವಾಗಿ ಹೈ ಕಮಾಂಡ್ ನವರು ಚಿಂತಿಸಿ ಮಾತನಾಡುವ ನಂಬಿಕೆ ಇದೆ. ಆಗ ನಾನು ಕೂಡಾ ಬಿಜೆಪಿಗೆ ಸೇರುವ ವಿಚಾರವಾಗಿ ತೀರ್ಮಾನ ಮಾಡುವೆ ಎಂದರು.
ರಾಯಣ್ಣ ಬ್ರೀಗೇಡ್ ವಿಚಾರಕ್ಕೆ, ಈ ಕುರಿತು ಹಿಂದೆ ಯಡಿಯೂರಪ್ಪ ಕೇಂದ್ರದವರಿಗೆ ಕಂಪ್ಲೇಟ್ ಮಾಡಿದ್ದರು. ಆಗ ಕೇಂದ್ರದ ನಾಯಕರು ನನ್ನ ಕರೆದು ಕೈ ಬಿಡುವಂತೆ ಹೇಳಿದರು. ಆಗ ನಾನು ಬ್ರಿಗೇಡ್ ನಿಂದ ಸ್ವಲ್ಪ ದೂರ ಉಳಿದೆ. ಆ ಬ್ರಿಗೇಡ್ ಕೈ ಬಿಟ್ಟಿದ್ದೇ ತಪ್ಪು ಎಂದು ಇಂದು ನನಗೆ ಪಶ್ಚಾತಾಪ ಪಡುವಂತಾಗಿದೆ ಎಂದರು.
ವಿಜಯೇಂದ್ರ ಕುರ್ಚಿ ಗಟ್ಟಿ ಇಲ್ಲ ಎಂಬ ಎಂ.ಬಿ. ಪಾಟೀಲ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಎಂ.ಬಿ. ಪಾಟೀಲ ಮೇಲ್ನೋಟಕ್ಕೆ ಸಿದ್ದರಾಮಯ್ಯ ನವರಿಗೆ ಬೆಂಬಲ ಎನ್ನುತ್ತಾರೆ. ಆದರೆ ಒಳಗೊಳಗೆ ಸಿಎಂ ಕುರ್ಚಿ ಮೇಲೆ ಹಂಬಲ ಹೊಂದಿದ್ದಾರೆ. ಇದು ಕೇವಲ ಎಂ ಬಿ ಪಾಟೀಲ ಅಲ್ಲ ಬಹುತೇಕ ರಾಜಕಾರಣಿಗಳದ್ದು ಇದೇ ಇದೆ ಎಂದರು.