ಕುವೈತ್‌ನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಹೆಲ್ಪ್‌ಲೈನ್ ತೆರೆದ ಭಾರತೀಯ ರಾಯಭಾರಿ ಕಚೇರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕುವೈತ್‌ನ ದಕ್ಷಿಣದ ಮಂಗಾಫ್‌ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡದ ಬೆಂಕಿ ಅವಘಡ ಸಂಭವಿಸಿ, ಭಾರತೀಯರು ಸೇರಿದಂತೆ 41 ಜನರು ಸಾವನ್ನಪ್ಪಿದ್ದಾರೆ.

ಇಂದು ಬೆಳಗ್ಗೆ ಅಡುಗೆಮನೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ಕಟ್ಟಡದ ತುಂಬೆಲ್ಲಾ ಆವರಿಸಿಕೊಂಡಿದೆ. ಈ ಬೆಂಕಿ ದುರಂತದಲ್ಲಿ 41 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಕುವೈತ್ ಉಪ ಪ್ರಧಾನಿ ಮಾಹಿತಿ ನೀಡಿದ್ದಾರೆ.

ಬೆಂಕಿ ಅವಘಡದಲ್ಲಿ ಕೇರಳ ಮೂಲದ ಐವರು ಮೃತರಾಗಿದ್ದಾರೆ. ಕೇರಳ ಮೂಲದ ಉದ್ಯಮಿ ಕೆ.ಜಿ. ಅಬ್ರಾಹಾಂ ಒಡೆತನದ ಕಟ್ಟಡ ಇದಾಗಿದ್ದು, ಇಲ್ಲಿ ತಮಿಳುನಾಡು ಹಾಗೂ ಕೇರಳದ 195 ಕಾರ್ಮಿಕರು ವಾಸವಾಗಿದ್ದರು. ಬೆಂಕಿ ದುರಂತಕ್ಕೆ ಆಘಾತ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಸಚಿವ ಎಸ್‌.ಜೈಶಂಕರ್, ಕುವೈತ್ ಸಿಟಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 40 ಜನರು ಸಾವನ್ನಪ್ಪಿದ್ದಾರೆ. 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೃತರ ಸಾವಿಗೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವರು, ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ನಮ್ಮ ರಾಯಭಾರಿ ಕಚೇರಿಯಿಂದ ಸಂಪೂರ್ಣ ಸಹಾಯ ಸಿಗಲಿದೆ ಎಂದು ಜೈಶಂಕರ್ ಭರವಸೆಯನ್ನು ನೀಡಿದ್ದಾರೆ.

ತುರ್ತು ಸಹಾಯವಾಣಿ ಸಂಖ್ಯೆ ಹೀಗಿದೆ
ಘಟನೆಯಲ್ಲಿ 30ಕ್ಕೂ ಹೆಚ್ಚು ಭಾರತೀಯರು ಗಾಯಗೊಂಡಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಗಾಯಾಳುಗಳನ್ನು ಭೇಟಿಯಾಗಿದ್ದಾರೆ. ರಾಯಭಾರ ಕಚೇರಿ ಎಲ್ಲರಿಗೂ ನೆರವು ನೀಡಲಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ. ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಭಾರತದ ಕುಟುಂಬಸ್ಥರು ತುರ್ತು ಸಹಾಯವಾಣಿ ಸಂಖ್ಯೆ 965-65505246ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಸಾಧ್ಯವಿರೋ ಎಲ್ಲಾ ಸಹಾಯ ಮಾಡಲು ರಾಯಭಾರಿ ಕಚೇರಿ ಬದ್ಧವಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!