ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ನ ಒಸಾಕಾದ ವಾಣಿಜ್ಯ ಕಟ್ಟಡವೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಟ 27 ಮಂದಿ ಮೃತಪಟ್ಟಿದ್ದಾರೆ.
ಒಸಾಕಾ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ದುರಂತದಲ್ಲಿ ಒಟ್ಟು 28 ಮಂದಿ ಸಿಲುಕಿದ್ದರು. ಅವರಲ್ಲಿ 27 ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇಂದು ಬೆಳಗ್ಗೆ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿದೆ ಎಂದು ಹೇಳಿದ್ದಾರೆ.
70 ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಪಶ್ಚಿಮ ಜಪಾನ್ನ ಕಿಟಾಂಶಿಂಚಿ ರೈಲು ನಿಲ್ದಾಣದ ಬಳಿ ಈ ಕಟ್ಟಡವಿದ್ದು, ಅರ್ಧ ಗಂಟೆ ಬೆಂಕಿ ಜೋರಾಗಿ ಹೊತ್ತಿ ಉರಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಟ್ಟಡದ ಒಳಗಿದ್ದ ಕಡೆಯ ವ್ಯಕ್ತಿ ಬಗ್ಗೆ, ಬೆಂಕಿ ಹತ್ತಿದ್ದು ಹೇಗೆ ಎನ್ನುವ ಬಗ್ಗೆ ಮಾಹಿತಿ ದೊರೆಯಬೇಕಿದೆ.