ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಿಲ್ಲಿ: ಭಾರತ ಇಂದು ಒಡಿಶಾದ ಬಾಲಾಸೋರ್ ಕರಾವಳಿಯಲ್ಲಿ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಹೊಸ ಪೀಳಿಗೆಯ ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ‘ಅಗ್ನಿ ಪ್ರೈಮ್’ ಅನ್ನು ಅಭಿವೃದ್ಧಿ ಪಡಿಸಿದೆ.
ಕ್ಷಿಪಣಿಯನ್ನು ಒಡಿಶಾದ ಬಾಲಸೋರ್ ಕರಾವಳಿಯ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಬೆಳಗ್ಗೆ 11.06 ಗಂಟೆಗೆ ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಅಗ್ನಿ-ಪಿ ಕ್ಷಿಪಣಿಯ ಎರಡನೇ ಪರೀಕ್ಷೆಯಾಗಿದೆ. ಮೊದಲ ಪರೀಕ್ಷೆಯನ್ನು ಜೂನ್ 28 ರಂದು ಅದೇ ಸ್ಥಳದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಪರಮಾಣು ಸಾಮರ್ಥ್ಯದ ಕಾರ್ಯತಂತ್ರದ ಕ್ಷಿಪಣಿ ಅಗ್ನಿ ಪ್ರೈಮ್ಗೆ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.
ವಿವಿಧ ಟೆಲಿಮೆಟ್ರಿ, ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಸ್ಟೇಷನ್ಗಳು ಮತ್ತು ಪೂರ್ವ ಕರಾವಳಿಯ ಉದ್ದಕ್ಕೂ ಸ್ಥಾನದಲ್ಲಿರುವ ಡೌನ್ ರೇಂಜ್ ಹಡಗುಗಳು, ಕ್ಷಿಪಣಿ ಪಥ ಮತ್ತು ನಿಯತಾಂಕಗಳನ್ನು ಟ್ರ್ಯಾಕ್ ಹಾಗೂ ಮೇಲ್ವಿಚಾರಣೆ ಮಾಡುತ್ತವೆ. ಕ್ಷಿಪಣಿ ಪರೀಕ್ಷೆಯು ಅದರ ಎಲ್ಲಾ ಮಿಷನ್ ಉದ್ದೇಶಗಳನ್ನು ಉನ್ನತ ಮಟ್ಟದ ನಿಖರತೆಯೊಂದಿಗೆ ಪೂರೈಸಿದೆ.
ಅಗ್ನಿ-ಪಿ ಅಗ್ನಿ ವರ್ಗದ ಕ್ಷಿಪಣಿಗಳ ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ. ಇದು 1000 ಮತ್ತು 2000 ಕಿ.ಮೀ. ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿರುವ ಕ್ಯಾನಿಸ್ಟರೈಸ್ಡ್ ಕ್ಷಿಪಣಿಯಾಗಿದೆ. ಅಗ್ನಿ-ಪಿ ಎರಡು ಹಂತದ ಡಬ್ಬಿಯಾಕಾರದ ಘನ ಪ್ರೊಪೆಲ್ಲೆಂಟ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಯು ಅಗ್ನಿ 3ಕ್ಕಿಂತ ಶೇ. 50ರಷ್ಟು ಕಡಿಮೆ ತೂಗುತ್ತದೆ. ಡ್ಯುಯಲ್ ರಿಡಂಡೆಂಟ್ ನ್ಯಾವಿಗೇಷನ್ ಮತ್ತು ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿದೆ. ಈ ಎರಡನೇ ಉಡಾವಣಾ-ಪರೀಕ್ಷೆಯು ಸಿಸ್ಟಮ್ನಲ್ಲಿ ಸಂಯೋಜಿಸಲ್ಪಟ್ಟ ಎಲ್ಲ ಸುಧಾರಿತ ತಂತ್ರಜ್ಞಾನಗಳ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯಶಸ್ವಿ ಹಾರಾಟ ಪರೀಕ್ಷೆಗಾಗಿ ಡಿಆರ್ಡಿಒ ಅನ್ನು ಅಭಿನಂದಿಸಿದ್ದಾರೆ. ಅಲ್ಲದೇ ಸಿಸ್ಟಮ್ನ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ. ಒಂದೇ ವರ್ಷದಲ್ಲಿ ಅನೇಕ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಎರಡನೇ ಉಡಾವಣಾ ಪ್ರಯೋಗವನ್ನು ಮಾಡಿದ ತಂಡದ ಪ್ರಯತ್ನಗಳನ್ನು ರಕ್ಷಣಾ ಇಲಾಖೆಯ ಆರ್.ಡಿ. ಕಾರ್ಯದರ್ಶಿ ಮತ್ತು ಡಿಆರ್ಡಿಒ ಅಧ್ಯಕ್ಷ ಡಾ. ಜಿ. ಸತೀಶ್ ರೆಡ್ಡಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.