ಹೊಸದಿಗಂತ ವರದಿ,ಮದ್ದೂರು:
ಪಟ್ಟಣದ ತಾಲೂಕು ಕ್ರೀಡಾಂಗಣದ ಸಮೀಪದ ಗುಜುರಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂ. ವೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.
ಸುದ್ಧಿ ತಿಳಿದ ತಕ್ಷಣ ಎರಡು ವಾಹನಗಳಲ್ಲಿ ಸ್ಥಳಕ್ಕೆ ಜಮಾಯಿಸಿದ ಅಗ್ನಿಶಾಮಕ ತಂಡ ಬೆಂಕಿಯನ್ನು ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಲೀಲಾವತಿ ಬಡಾವಣೆಯ ಅಕ್ಮಲ್ಪಾಷ ಎಂಬುವರ ಗುಜುರಿ ಅಂಗಡಿಯಲ್ಲಿ ಮಧ್ಯಾಹ್ನ 3-40ರ ಸಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿಯ ಜ್ವಾಲೆ ಇಡೀ ಅಂಗಡಿಗೆ ವ್ಯಾಪಿಸಿದ ಪರಿಣಾಮ ದ್ವಿಚಕ್ರ ವಾಹನ, ಕಬ್ಬಿಣದ ಶೀಟ್ಗಳು, ಪ್ಲಾಸ್ಟಿಕ್ ಪೈಪ್ ಹಾಗೂ ಮೂರು ಟನ್ ಗುಜುರಿ ವಸ್ತುಗಳು ಬೆಂಕಿಗಾಹುತಿಯಾಗಿ ಸುಮಾರು 2.50 ಲಕ್ಷ ರೂ. ನಷ್ಟವುಂಟಾಗಿದೆ ಎಂದು ಅಂದಾಜು ಮಾಡಲಾಗಿದೆ.
ಗುಜುರಿ ಅಂಗಡಿ ಮಾಲೀಕ ಅಕ್ಮಲ್ಪಾಷ ಮತ್ತು ನೌಕರರು ವಾಹನಗಳ ಅನುಪಯುಕ್ತ ಟೈರ್ಗಳಲ್ಲಿದ್ದ ತಾಮ್ರದ ತಂತಿಗಳನ್ನು ಟೈರ್ಗಳಿಂದ ಬೇರ್ಪಡಿಸಲು ಬೆಂಕಿ ಹಚ್ಚಿದ್ದಾರೆ. ಇದರಿಂದ ಬೆಂಕಿಯ ಕೆನ್ನಾಲಿಗೆ ಇಡೀ ಅಂಗಡಿಗೆ ವ್ಯಾಪಿಸಿದ ಪರಿಣಾಮ ಅನಾಹುತ ಸಂಭವಿಸಿದೆ.
ಅಗ್ನಿಶಾಮಕ ಪ್ರಬಾರ ಠಾಣಾಧಿಕಾರಿ ಸೋಮಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹನುಮಂತಯ್ಯಘಿ, ವೆಂಕಟೇಶ್, ಲೋಕೇಶ್ ನಾಯಕ್, ರಂಗಸ್ವಾಮಿ, ಪ್ರೀತಂ ಹಾಗೂ ಬಾಬು ಅವರುಗಳು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.