ಹೊಸದಿಗಂತ ವರದಿ, ದಾವಣಗೆರೆ:
ಕಾಣಿಕೆ ಹುಂಡಿಗೆ ಬೆಂಕಿ ಬಿದ್ದು ಅದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ನೋಟುಗಳು ಸುಟ್ಟು ಹಾಳಾಗಿರುವ ಘಟನೆ ತಾಲೂಕಿನ ದೊಡ್ಡಬಾತಿ ಗ್ರಾಮದ ದರ್ಗಾದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಗ್ರಾಮದ ದರ್ಗಾದಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಗೆ ಬೆಂಕಿ ಬಿದ್ದಿದ್ದು, ಲಕ್ಷಾಂತರ ರೂ. ಮೌಲ್ಯದ ಸಾವಿರಾರು ನೋಟುಗಳು ಸುಟ್ಟು ಕರಕಲಾಗಿವೆ. ಹುಂಡಿಯಿಂದ ಬೆಂಕಿ ಬರುತ್ತಿರುವುದನ್ನು ಗಮನಿಸಿದ ದರ್ಗಾದ ಸಿಬ್ಬಂದಿ, ಭಕ್ತರು ನೀರು ಹಾಕಿ, ಬೆಂಕಿಯನ್ನು ನಂದಿಸಿದ್ದಾರೆ. ವಿಷಯ ತಿಳಿದು ದೊಡ್ಡಬಾತಿ ದರ್ಗಾಗೆ ತೆರಳಿದ ವಕ್ಫ್ ಮಂಡಳಿ ಅಧಿಕಾರಿ, ಸಿಬ್ಬಂದಿ ಅರೆಬರೆ ಸುಟ್ಟಿದ್ದ, ನೀರಿನಿಂದ ತೊಯ್ದಿದ್ದ ನೋಟುಗಳನ್ನು ದರ್ಗಾ ಸಿಬ್ಬಂದಿ ಜೊತೆಗೂಡಿ ಬೇರ್ಪಡಿಸಿ, ಎಣಿಕೆ ಮಾಡುವಲ್ಲಿ ನಿರತರಾಗಿದ್ದಾರೆ.
ಲಕ್ಷಾಂತರ ರೂ. ಹಣ ಕಾಣಿಕೆ ರೂಪದಲ್ಲಿ ಹುಂಡಿಯಲ್ಲಿ ಸೇರಿತ್ತು ಎನ್ನಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.