ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ನಂತರ ಕೆಲವು ದಿನಗಳ ಕಾಲ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಿಷಕಾರಿ ಗಾಳಿಯಿಂದ ತುಂಬಿದ್ದಕ್ಕೆ ಸುಪ್ರಿಂ ಕೋರ್ಟ್ ಸರ್ಕಾರ ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ಪಟಾಕಿ ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ ಎಂದು ಸುಪ್ರೀಂ ಕೋರ್ಟ್ ಸರ್ಕಾರ ಮತ್ತು ಪೊಲೀಸರಿಗೆ ಚಾಟಿ ಬೀಸಿದೆ.
ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧ ಕ್ರಮವನ್ನು ಪ್ರತಿ ವರ್ಷ ಘೋಷಿಸುವ ಮತ್ತು ನಿರ್ಲಕ್ಷಿಸುವ ವಿಚಾರದ ಬಗ್ಗೆ ಸರ್ಕಾರ ಮತ್ತು ಪೊಲೀಸರು ತಕ್ಷಣ ಪ್ರತಿಕ್ರಿಯೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪಟಾಕಿಗಳ ನಿಷೇಧವನ್ನು ದೆಹಲಿ ಎನ್‌ಸಿಆರ್‌ನಲ್ಲಿ ಜಾರಿಗೆ ತರಲಾಗಿಲ್ಲ ಎಂದು ವ್ಯಾಪಕ ವರದಿಗಳಿವೆ. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಪ್ರಮುಖ ಕ್ರಮವಾಗಬೇಕಿತ್ತು ಎಂದು ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಪಟಾಕಿ ನಿಷೇಧ ಕುರಿತು ಸರ್ಕಾರದ ಆದೇಶವೇನು? ಅದನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತಿದೆ? ಎಂದು ನ್ಯಾಯಾಲಯ ಸರ್ಕಾರಕ್ಕೆ ಪ್ರಶ್ನಿಸಿದೆ. 2025 ರಲ್ಲಿ ದೆಹಲಿಯು ಮಾಲಿನ್ಯಕಾರಕಗಳಿಂದ ಉಸಿರುಗಟ್ಟುವ ವಾತಾವರಣ ಸೃಷ್ಠಿಯಾಗುವುದಿಲ್ಲ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಸರ್ಕಾರದ ಆದೇಶ ಏನಾದರೂ ಕೆಲಸ ಮಾಡಬೇಕು ಎಂದು ಪೀಠ ಸರ್ಕಾರದ ಕಿವಿ ಹಿಂಡಿದೆ.