ಪ್ರಥಮ ಐಪಿಎಲ್ ಪ್ರಶಸ್ತಿ ಮೇಲೆ ಆರ್‌ಸಿಬಿ ಚಿತ್ತ !

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತನ್ನ ಪ್ರಥಮ ಐಪಿಎಲ್ ಪ್ರಶಸ್ತಿಯನ್ನು ಗಳಿಸುವ ಗುರಿಯತ್ತ ಕಣ್ಣು ನೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಕ್ರವಾರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆದ್ದುದಾದರೆ ಭಾನುವಾರ ಗುಜರಾತ್ ಟೈಟನ್ಸ್‌ನ್ನು ಫೈನಲಿನಲ್ಲಿ ಎದುರಿಸಲು ಅರ್ಹತೆ ದೊರಕಲಿದೆ.
ಅದೃಷ್ಟ ಬಲದಿಂದೆಂಬಂತೆ ಪ್ಲೇಆಫ್‌ಗೆ ಸಾಗಿ ಬಂದಿರುವ ಆರ್‌ಸಿಬಿ ಬುಧವಾರ ಮಾತ್ರ ಉತ್ಕೃಷ್ಟ ಪ್ರದರ್ಶನ ನೀಡಿ ಲಕ್ನೋ ಸುಪರ್‌ಜೈಂಟ್ಸ್‌ನ್ನು 14 ರನ್‌ಗಳಿಂದ ಪರಾಭವಗೊಳಿಸಿತ್ತು. ರಜತ್ ಪಾಟೀದಾರ್ ಅವರ ಆಕರ್ಷಕ ಶತಕವು ಆರ್‌ಸಿಬಿ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತ್ತು.
ಈ ಗೆಲುವಿನೊಂದಿಗೆ ಆರ್‌ಸಿಬಿ ತನ್ನ ವಿಶ್ವಾಸ ವೃದ್ಧಿಸಿಕೊಂಡಿದೆ. ಕೇವಲ ಕೊಹ್ಲಿ, ಡು ಪ್ಲೆಸಿ, ಮ್ಯಾಕ್ಸ್‌ವೆಲ್ ಮಾತ್ರವಲ್ಲದೆ ಇನ್ನಿತರ ಆಟಗಾರರೂ ಸಂದರ್ಭಕ್ಕೆ ತಕ್ಕಂತೆ ತಂಡದ ನೆರವಿಗೆ ಬರುತ್ತಿರುವುದು ಪ್ಲಸ್ ಪಾಯಿಂಟ್ ಎನಿಸಿದೆ. 49 ಎಸೆತಗಳಿಂದಲೇ ಶತಕ ಪೂರೈಸಿದ್ದ ರಜತ್ ಪಾಟೀದಾರ್ 54 ಎಸೆತಗಳಿಂದ ಅಜೇಯ 112 ರನ್ ಗಳಿಸಿದ್ದರು. ದಿನೇಶ್ ಕಾರ್ತಿಕ್ ಕೂಡ ಉಪಯುಕ್ತ ರನ್ ಪೇರಿಸುವುದರೊಂದಿಗೆ ತಂಡವು 207 ರನ್ ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಲಕ್ನೋ ಸುಪರ್‌ಜೈಂಟ್ಸ್ 193 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಕೊಲ್ಕತಾದಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಸಾಕಷ್ಟು ರನ್‌ಗಳು ಹರಿದುಬಂದಿದ್ದವು. ಆದರೆ ಶುಕ್ರವಾರದ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇಲ್ಲಿನ ಪಿಚ್ ಹೇಗೆ ವರ್ತಿಸುವುದೆಂದು ಇನ್ನಷ್ಟೆ ಕಂಡುಕೊಳ್ಳಬೇಕಿದೆ.
“ಎಲ್ಲವೂ ನಮ್ಮ ಪರವಾಗಿ ಬದಲಾಗುತ್ತಿದೆ. ನಾವು ಹೆಚ್ಚು ವಿಶ್ವಾಸ ತುಂಬಿಕೊಂಡಿದ್ದೇವೆ. ಇನ್ನು ಕೇವಲ ಎರಡು ಪಂದ್ಯಗಳು! ಮತ್ತೆ ನಾವು ಸಂಭ್ರಮವಾಚರಿಸುತ್ತೇವೆ ” ಎಂದು ವಿರಾಟ್ ಕೊಹ್ಲಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಲಕ್ನೋ ತಂಡದ ವಿರುದ್ಧ ಬ್ಯಾಟಿಂಗಿನಲ್ಲೂ , ಬೌಲಿಂಗಿನಲ್ಲೂ ಆರ್‌ಸಿಬಿ ಉತ್ತಮ ನಿರ್ವಹಣೆ ನೀಡಿತ್ತು. ದಿನೇಶ್ ಕಾರ್ತಿಕ್ ಅಂತೂ ಉತ್ತಮ ಫಿನಿಶರ್ ಆಗಿ ಮೂಡಿಬಂದಿದ್ದಾರೆ. ಆದರೆ ಸಮಸ್ಯೆಯೆಂದರೆ ತಂಡದ ಆರಂಭವೇ ಶಿಥಿಲವಾಗಿದ್ದು , ಅದನ್ನು ಬಲಪಡಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಕೊಹ್ಲಿ, ಫಾಪ್ ಡುಪ್ಲೆಸಿ ಉತ್ತಮ ನಿರ್ವಹಣೆ ನೀಡಬೇಕಾಗಿದೆ.
ಆರ್‌ಸಿಬಿಗೆ ಹೋಲಿಸಿದರೆ ರಾಜಸ್ಥಾನ ರಾಯಲ್ಸ್ ಸಂತುಲಿತ ನಿರ್ವಹಣೆ ನೀಡುತ್ತಾ ಬಂದಿದೆ. ಆರ್‌ಸಿಬಿಯಂತೆ ದೊಡ್ಡ ಮಟ್ಟದ ಏರುಪೇರು ಕಂಡಿಲ್ಲ. ಪ್ರಮುಖ ಬ್ಯಾಟರ್‌ಗಳು ಉತ್ತಮ ಕೊಡುಗೆ ನೀಡುತ್ತಿರುವುದು ತಂಡದ ಗುಣಾತ್ಮಕ ಅಂಶ. ಬೌಲಿಂಗ್ ವಿಭಾಗವಂತೂ ವೇಗ ಮತ್ತು ಸ್ಪಿನ್ ಎರಡರಲ್ಲೂ ಬಲಿಷ್ಟವಾಗಿದೆ. ಬೌಲರ್ ಆರ್. ಅಶ್ವಿನ್ ಅಂತೂ ಉತ್ತಮ ಆಲ್‌ರೌಂಡರ್ ಆಗಿ ಮೂಡಿಬರುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಜು ಸ್ಯಾಮ್ಸನ್‌ರ ‘ಸ್ಥಿತಪ್ರಜ್ಞ ನಾಯಕತ್ವ ’ ತಂಡಕ್ಕೆ ಬಲ ತುಂಬಿದೆ.
ಆರ್‌ಸಿಬಿ ಅದೃಷ್ಟವು ಇಂದೂ ತನ್ನ ಕೈಬಿಡಲಾರದು ಎಂಬ ನಂಬಿಕೆಯಲ್ಲಿದೆ. ಫೈನಲ್‌ನತ್ತ ಅದರ ಪಯಣ ಸಾಗುವುದೇ ಇಲ್ಲವೇ ಎಂದು ಕಾದುನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!