ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಅಂಕೋಲಾ:
ತಪ್ಪು ದಿಶೆಯಲ್ಲಿ ಎದುರಿನಿಂದ ಬಂದ ಸಾರಿಗೆ ಸಂಸ್ಥೆಯ ಬಸ್ ತಪ್ಪಿಸಲು ಹೋಗಿ ಮೀನು ತುಂಬಿದ ಕಂಟೇನರ್ ಲಾರಿ ಪಲ್ಟಿಯಾಗಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ಚೆಲ್ಲಾಪಿಲ್ಲಿಯಾದ ಘಟನೆ ಅಂಕೋಲಾ ಪಟ್ಟಣದ ಎ.ಪಿ.ಎಂ.ಸಿ ಮೈದಾನದ ಪಕ್ಕದ ಪೆಟ್ರೋಲ್ ಪಂಪ್ ಎದುರು ಬುಧವಾರ ಸಂಜೆ ಸಂಭವಿಸಿದೆ.
ಶಿರಕುಳಿ ಕ್ರಾಸ್ ನಿಂದ ಕಣಕಣೇಶ್ವರ ದೇವಸ್ಥಾನದ ವರೆಗೆನ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಕಾರಣ ಅಂಕೋಲಾ ಪಟ್ಟಣದ ಒಳ ಬರುವ ಮತ್ತು ಹೊರ ಹೋಗುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ ಹುಬ್ಬಳ್ಳಿಯಿಂದ ಬಂದು ಕಾರವಾರಕ್ಕೆ ತೆರಳಬೇಕಾದ ಬಸ್ ಚಾಲಕ ಸೂಚಿಸಿದ ರಸ್ತೆಯಲ್ಲಿ ಸಂಚರಿಸದೇ ಶಾರ್ಟಕಟ್ ಮೂಲಕ ಸಾಗುವ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪ್ಪು ಪಥದಲ್ಲಿ ವೇಗವಾಗಿ ಸಂಚರಿಸಿರುವುದು ಅಪಘಾತ ಸಂಭವಿಸಲು ಕಾರಣ ಎನ್ನಲಾಗಿದ್ದು, ಕೇರಳದಿಂದ ಗೋವಾಕ್ಕೆ ಏಕಮುಖ ಪಥದಲ್ಲಿ ಸಾಗುತ್ತಿದ್ದ ಲಾರಿ ಚಾಲಕನಿಗೆ ಒಮ್ಮೆಲೇ ಬಸ್ ಎದುರಾಗಿದ್ದರಿಂದ ಮುಖಾಮುಖಿ ತಪ್ಪಿಸುವ ಪ್ರಯತ್ನದಲ್ಲಿ ರಸ್ತೆ ಪಕ್ಕಕ್ಕೆ ಎಳೆದು ಕೊಂಡ ಪರಿಣಾಮ ಲಾರಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಲಾರಿ ಚಾಲಕ ತನ್ನ ಪ್ರಾಣದ ಹಂಗನ್ನು ತೊರೆದು ಬಸ್ ಪ್ರಯಾಣಿಕರ ಜೀವ ಉಳಿಸುವ ಪ್ರಯತ್ನ ಮಾಡಿರುವುದರಿಂದ ಭಾರೀ ಅನಾಹುತ ತಪ್ಪಿಸಿದಂತಾಗಿದೆ
ಕಂಟೇನರ್ ಪಲ್ಟಿಯಾದ ರಭಸಕ್ಕೆ ಎರಡು ಬದಿಯ ಬಾಡಿ ಸಂಪೂರ್ಣವಾಗಿ ಕಿತ್ತು ಹೋಗಿದ್ದು ರಸ್ತೆ ಪಕ್ಕದಲ್ಲಿ ನಿಂತ ಬೈಕ್ ಗೂ ಹಾನಿ ಸಂಭವಿಸಿದೆ.
ಕಂಟೇನರ್ ಒಳಗೆ ಸಿಲುಕಿಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಚಾಲಕನ್ನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹರ ಸಾಹಸ ಪಟ್ಟು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ.
ಬಸ್ಸಿನ ಮುಂಬಾಗ ಜಕಂ ಆಗಿದ್ದು ಚಾಲಕ ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.