ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸಲು ಸಲಹೆಗಳಿಗೆ ಸರ್ಕಾರ ಮುಕ್ತ: ಬೊಮ್ಮಾಯಿ

ಹೊಸ ದಿಗಂತ ವರದಿ,  ದಾವಣಗೆರೆ:

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸಲು ಸಲಹೆಗಳಿಗೆ ಸರ್ಕಾರ ಮುಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರಕ್ಕೆ ಗುರುವಾರ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಸಲಹೆ, ಆಕ್ಷೇಪಣೆ ಆಹ್ವಾನಿಸಲಾಗಿದೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಕುರಿತಂತೆ ಪ್ರಸ್ತುತ ಹಾಗೂ ಹಿಂದಿನ ವಿವರವನ್ನು ಮುಕ್ತವಾಗಿ ಪ್ರಕಟಿಸಲಾಗಿದೆ. ಈ ಹಿಂದಿನ ಪಠ್ಯ ಪರಿಷ್ಕರಣೆ ಸಂದರ್ಭದಲ್ಲೂ ಆಗಿರುವ ತಪ್ಪು ಸೇರಿದಂತೆ ಪ್ರಸ್ತುತ ಪರಿಷ್ಕರಣೆಯಲ್ಲಿನ ತಪ್ಪುಗಳನ್ನೂ ಸರಿಪಡಿಸಲಾಗುವುದು ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯತ್ಯಾಸಗಳಾಗಿದ್ದರೆ ಸರಿಪಡಿಸಲು ಶಿಕ್ಷಣ ಸಚಿವ ನಾಗೇಶ್ ಅವರಿಗೆ ಸೂಚಿಸಲಾಗಿದೆ. ಪಠ್ಯಕ್ರಮದಲ್ಲಿ ಯಾವ ವಿಷಯ ಇರಬೇಕು ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ. ಚಿಂತಕರು, ಸಾಹಿತಿಗಳು ಯಾರೇ ಸಲಹೆ ನೀಡಿದರೂ ಅದನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ. ಜನತೆ ನೀಡಿದ ಸಲಹೆಯಂತೆ ಪಠ್ಯ ಪರಿಷ್ಕರಣೆ ಮಾಡಲಾಗುವುದು. ಇದನ್ನು ಈಗಾಗಲೇ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದ್ದು, ಕೆಲವು ಆಕ್ಷೇಪಣೆಗಳು ಬಂದಿವೆ. ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ, ಈಗಿನ ಪಠ್ಯ ಪರಿಷ್ಕರಣೆ ಬಗ್ಗೆಯೂ ಆಕ್ಷೇಪಗಳು ಕೇಳಿ ಬಂದಿವೆ. ಅಂತಹದ್ದನ್ನು ಸರಿಪಡಿಸಲು, ಸರಿ ಇಲ್ಲದ್ದನ್ನು ಸರಿ ಮಾಡಲು ಕ್ರಮ ಕೈಗೊಂಡಿದ್ದೇವೆ. ಎಲ್ಲಾ ಆಕ್ಷೇಪಣೆ, ಸಲಹೆ ಪಡೆದ ನಂತರವಷ್ಟೇ ಪಠ್ಯ ಪರಿಷ್ಕರಣೆ ಅಂತಿಮ ರೂಪ ಪಡೆಯಲಿದೆ ಎಂದು ಅವರು ತಿಳಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹೊರ ರಾಜ್ಯಗಳಿಗೆ ಶಾಲಾ ಪ್ರವಾಸ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಹಿಂದಿ, ಇಂಗ್ಲೀಷ್ ಭಾಷೆ ಕಡ್ಡಾಯ ಎಂಬ ಯಾವುದೇ ಸುತ್ತೋಲೆ ಕೇಂದ್ರ ಸರ್ಕಾರದಿಂದ ಬಂದಿಲ್ಲ. ಈ ರೀತಿ ಸುತ್ತೋಲೆ ಹೊರಡಿಸಿzಷಿಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಭಕ್ತವತ್ಸಲಂ ಸಮಿತಿ ಮೀಸಲಾತಿ ನಿಗಧಿ ಸಂಬಂಧ ಪ್ರಕ್ರಿಯೆ ಆರಂಭಿಸಿದೆ. ಮೊದಲ ಹಂತದಲ್ಲಿ ಬಿಬಿಎಂಪಿ ಚುನಾವಣೆ ಮೀಸಲಾತಿ ವರದಿಯನ್ನು ಸಮಿತಿ ನೀಡಲಿದೆ. ನಂತರ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಮೀಸಲಾತಿ ವರದಿಯನ್ನು ನೀಡಲಿದ್ದು, ಅದರ ಆಧಾರದಲ್ಲಿ ಮೀಸಲಾತಿ ನಿಗಧಿ ಪಡಿಸಲಾಗುವುದು ಎಂದು ಅವರು ನುಡಿದರು.
ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಕಾವೇರಿ ಜಲ ನಿರ್ವಹಣೆ ಪ್ರಾಧಿಕಾರಕ್ಕೆ ಸಂಪೂರ್ಣ ಪರಮಾಧಿಕಾರ ಇದೆ. ಮುಂದಿನ ವಾರ ದ ಸಿಡ್ಲೂಎಂಎ ಸಭೆ ನಡೆಯುವ ಸಾಧ್ಯತೆ ಇದ್ದು, ಈಗಾಗಲೇ ನಮ್ಮ ವಾದವನ್ನು ಮಂಡಿಸಿದ್ದೇವೆ. ತಮಿಳುನಾಡು ಏನೇ ಆಕ್ಷೇಪಣೆ ಎತ್ತಿದರೂ, ನಮ್ಮ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ಸಿಗುವ ವಿಶ್ವಾಸವಿದೆ. ತಮಿಳುನಾಡು ಸಚಿವರು ಪ್ರಧಾನಿಗೆ ಪತ್ರ ಬರೆದಿರುವುದಾಗಿ ಹೇಳಿರುವ ವಿಚಾರಕ್ಕೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಭೈರತಿ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ಮೇಯರ್ ಜಯಮ್ಮ ಗೋಪಿನಾಯ್ಕ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ ಇತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!