ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ವರದಿ, ಕಲಬುರಗಿ:
ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ನಡೆಸುತ್ತಿರುವ ಸಿಟಿ ಸ್ಕ್ಯಾನ್ನಿಂಗ್ ಗೆ ದರ ನಿಗದಿ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಪತ್ತೆಗಾಗಿ ತಜ್ಞರು ಸಿಟಿ ಸ್ಕ್ಯಾನ್ ನಡೆಸಲು ಸಲಹೆ ನೀಡಿದ್ದಾರೆ. ಆದರೆ ಇದರಿಂದ ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಹಣ ಪಡೆಯುತ್ತಿರುವುದು ತಿಳಿದುಬಂದಿದೆ. ಹಾಗಾಗಿ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೂ ಸಿಟಿ ಸ್ಕ್ಯಾನಿಂಗ್ ಗೆ ದರ ನಿಗದಿ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ 2 ಕೋಟಿ ಲಸಿಕೆಗಳನ್ನು ಪಡೆಯಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಟಲ್ ಬಿಹಾರಿ ವಾಜಪೇಯಿ ಆಸ್ಪತ್ರೆಯಲ್ಲಿ ಲಸಿಕೆಗೆ ಚಾಲನೆ ನೀಡಲಿದ್ದಾರೆ. ಸಾರ್ವತ್ರಿಕ ಲಸಿಕೆ ಯಾವಾಗಿನಿಂದ ಆರಂಭವಾಗಲಿದೆ ಎಂಬುದು ಕಂಪನಿಗಳ ಉತ್ಪಾದನೆ ನೋಡಿಕೊಂಡು ತಿಳಿಸಲಾಗುತ್ತದೆ ಎಂದರು.
ಪ್ರಸ್ತುತ ಆರು ಸಾವಿರ ಲಸಿಕಾ ಕೇಂದ್ರಗಳಿದ್ದು, ಅವುಗಳಿಗೆ 3 ಲಕ್ಷ ಲಸಿಕೆ ಅಗತ್ಯವಿದೆ. ಆದರೆ, ಸಾರ್ವತ್ರಿಕ ಲಸಿಕೆ ಆರಂಭವಾದಾಗ ನಿತ್ಯ ಆರು ಲಕ್ಷ ಲಸಿಕೆಯಾದರೂ ಬೇಕಾಗುತ್ತದೆ ಎಂದರು.
ಚಿಕ್ಕಬಳ್ಳಾಪುರದ ಜನರಿಗೆ ಶೇ 15ರಷ್ಟು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಾಸಿಗೆ ನಿಗದಿಪಡಿಸಿದ್ದು ಅನಿವಾರ್ಯ. ಈ ಸಂದರ್ಭದಲ್ಲಿ ಜನರ ಜೀವ ಉಳಿಸುವುದು ಅಗತ್ಯ ಎಂದು ಸಮರ್ಥಿಸಿಕೊಂಡರು.
ಮೆಡಿಕಲ್ ಕಾಲೇಜುಗಳಿಲ್ಲದ ಚಿಕ್ಕಮಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಯಾದಗಿರಿ ಜಿಲ್ಲೆಗಳ ಕೋವಿಡ್ ರೋಗಿಗಳನ್ನು ಸಮೀಪದ ನಗರಗಳ ಮೆಡಿಕಲ್ ಕಾಲೇಜು ಹಾಗೂ ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ಕಳೆದ ವರ್ಷವೂ ಹೀಗೆ ಮಾಡಿದ್ದೆವು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರಿಗೆ ಮಾಹಿತಿ ಕೊರತೆ ಇದೆ ಎಂದರು.
ಸಂಸದ ಡಾ.ಉಮೇಶ ಜಾಧವ, ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ, ಡಾ.ಅವಿನಾಶ್ ಜಾಧವ, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಇದ್ದರು.