ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
ಹೊಸ ದಿಗಂತ ವರದಿ, ಚಿತ್ರದುರ್ಗ:
ಕೂಲಿ ನಾಲಿ ಮಾಡಿ ಸಂಕಷ್ಟದಲ್ಲಿ ಬದುಕು ಕಟ್ಟಿಕೊಂಡಿದ್ದ ಬಡ ಕುಟುಂಬಕ್ಕೆ ತಿಂದ ಆಹಾರವೇ ವಿಷವಾಗಿ ಪರಿಣಮಿಸಿದ್ದು, ಮೂರುಜನ ಸಾವನ್ನಪಿರುವ ಕರುಣಾಜನಕ ಘಟನೆ ಭರಮಸಾಗರ ಬಳಿಯ ಇಸಾಮುದ್ರ ಗ್ರಾಮದಲ್ಲಿ ನಡೆದಿದೆ.
ಎಂದಿನಂತೆ ಕೂಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ ಕುಂಟುಂಬದ ಸದಸ್ಯರು ಸೋಮವಾರ ರಾತ್ರಿ ಊಟ ಮುಗಿಸಿ ಮಲಗಿದ್ದಾರೆ. ಆದರೆತಿಂದ ಆಹಾರವೇ ವಿಷವಾಗಿ ಪರಿಣಮಿಸಿ ಕುಟುಂಬದ ಐದು ಮಂದಿ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಫಲಿಸದೆ ಕುಟುಂಬದ ಮೂರು ಜನ ಹಿರಿಯ ಸದಸ್ಯರು ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ತೀವ್ರ ಅಸ್ವಸ್ಥರಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಚಿತ್ರದುರ್ಗ ತಾಲೂಕಿನ ಭರಮಸಾಗರ ಬಳಿಯ ಇಸಾಮುದ್ರ ಗ್ರಾಮದ ತಿಪ್ಪಾನಾಯ್ಕ್ ಎಂಬ ವ್ಯಕ್ತಿ ವೃದ್ದ ತಾಯಿ ಗುಂಡೀಬಾಯಿ, ಪತ್ನಿ ಸುಧಾಬಾಯಿ ಹಾಗೂ ಮಗ ರಾಹುಲ್ ಮತ್ತು ವರ್ಷದ ಮಗಳು ರಮ್ಯಾ ಜೊತೆ ಕಡುಬಡತನದಲ್ಲೂ ಕೂಲಿನಾಲಿ ಮಾಡಿ ಬದುಕು ನಡೆಸುತ್ತಿದ್ದರು. ಸೋಮವಾರ ರಾತ್ರಿ ಕುಟುಂಬದ ಸದಸ್ಯರೆಲ್ಲರೂ ರಾಗಿ ಮುದ್ದೆ, ಕಾಳು ಸಾರು ಮಾಡಿ ಊಟ ಮುಗಿಸಿ ಮಲಗಿದ್ದರು. ಮಲಗಿದ ಸ್ವಲ್ಪ ಹೊತ್ತಿನಲ್ಲೇ ಇಡೀ ಕುಟುಂಬಕ್ಕೆ ವಾಂತಿ ಬೇಧಿಯಾಗಿ ಅಸ್ವಸ್ಥರಾಗಿದ್ದರು.
ಕೂಡಲೇ ಪಕ್ಕದ ಮನೆಯಲ್ಲಿದ್ದ ಅಣ್ಣನ ಮಗಳು ತಂದೆಗೆ ವಿಷಯ ತಿಳಿಸಿ ಎಲ್ಲರನ್ನೂ ಭರಮಸಾಗರ ಆಸ್ಪತ್ರೆಗೆ ಸಾಗಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ವೃದ್ದೆ ಗುಂಡೀಬಾಯಿ ಹಾಗೂ ಸೊಸೆ ಸುಧಾಬಾಯಿ ಸಾವನ್ನಪ್ಪಿದ್ದಾರೆ. ತಕ್ಷಣ ಎಚ್ಚತ್ತ ತಿಪ್ಪಾನಾಯ್ಕನ ಅಣ್ಣ ತಮ್ಮ ಹಾಗೂ ಮಕ್ಕಳನ್ನು ದಾವಣಗೆರೆಗೆ ಕರೆದೋಯ್ದು ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲೂ ಚಿಕಿತ್ಸೆ ಫಲಿಸದೇ ತಿಪ್ಪಾನಾಯ್ಕ್ ಕೊನೆಯುಸಿರೆಳಿದಿದ್ದಾರೆ. ತಿಪ್ಪಾನಾಯ್ಕ್ ಅವರ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಭರಮಸಾಗರ ಠಾಣೆ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರ ಮಾರ್ಗದರ್ಶನದಂತೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತರು ಸೇವಿಸಿದ್ದ ಆಹಾರದ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಸಹಜ ಸಾವಿನ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.