ಹೆಚ್ಚಾಗಿ ಜನರು ರಾತ್ರಿಯ ಊಟಕ್ಕೆ ಸೂಪ್ ಅನ್ನು ಸೇವಿಸುತ್ತಾರೆ. ಹಲವಾರು ಬಗೆಯ ಸೂಪ್‍ಗಳನ್ನು ತಯಾರಿಸಬಹುದು. ಇವತ್ತು ಆರೋಗ್ಯಕ್ಕೆ ಉತ್ತಮವಾಗಿರುವ ಬ್ರೊಕೊಲಿಯಿಂದ ತಯಾರಿಸಿದ ಸೂಪ್ ಅನ್ನು ಮಾಡುವುದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು
ಬ್ರೊಕೊಲಿ- ಒಂದು (ಮಧ್ಯಮ ಗಾತ್ರದ್ದು)
ಜೀರಿಗೆ (ತರಿತರಿಯಾಗಿ ಪುಡಿಮಾಡಿದ)- 1 ಟೀ ಚಮಚ
ಕಾಳುಮೆಣಸು ಪುಡಿ- 1 ರಿಂದ 2 ಟೀ ಚಮಚ
ಕೊತ್ತಂಬರಿ ಸೊಪ್ಪು- 2 ಟೀ ಚಮಚ
ಎಣ್ಣೆ- 1 ಟೀ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಬ್ರೊಕೊಲಿಯನ್ನು ಚೆನ್ನಾಗಿ ತೊಳೆದು ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದನ್ನು ಸ್ವಲ್ಪ ಹೊತ್ತು ಬೇಯಿಸಿ.
ಈಗ ಬಾಣಲೆಯಲ್ಲಿ 1 ಟೀ ಚಮಚ ಎಣ್ಣೆಯನ್ನು ಹಾಕಿ, ತರಿತರಿಯಾಗಿ ರುಬ್ಬಿದ ಜೀರಿಗೆ ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ, ಸ್ವಲ್ಪ ಹುರಿಯಿರಿ. ನಂತರ ಬೇಯಿಸಿದ ಬ್ರೊಕೊಲಿ ಸೇರಿಸಿ ಸುಮಾರು 5 ನಿಮಿಷಗಳ ಕಾಲ ಬೇಯಿಸಿ. ಈಗ ಸುಮಾರು 2 ಕಪ್ ನೀರು ಸೇರಿಸಿ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಬ್ರೊಕೊಲಿ ಚೆನ್ನಾಗಿ ಬೇಯುವವರೆಗೆ ಬೇಯಿಸಿ. ಅದು ಸಂಪೂರ್ಣವಾಗಿ ಬೆಂದಾಗ ಸ್ಟೌವ್ ಅನ್ನು ಆಫ್ ಮಾಡಿ.
ಈಗ ಬ್ರೊಕೊಲಿ ಚೆನ್ನಾಗಿ ತಣ್ಣಗಾದ ನಂತರ, ಅದನ್ನು ಬ್ಲೆಂಡರ್‌ನಲ್ಲಿ ಹಾಕಿ ಮಿಶ್ರಣ ಮಾಡಿ. ಮತ್ತೊಮ್ಮೆ ಈ ಮಿಶ್ರಣವನ್ನು ಬಾಣಲೆಗೆ ಹಾಕಿ ಬೇಯಿಸಿದರೆ ರುಚಿಕರವಾದ ಬ್ರೊಕೊಲಿ ಸೂಪ್ ರೆಡಿ.